ಸಾಲಮನ್ನಾ ನೆಪದಲ್ಲಿ ಬ್ಯಾಂಕ್ ದರೋಡೆ ಯತ್ನ: ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ
ಹುಬ್ಬಳ್ಳಿ, ಜೂನ್ 6: ಸತತ ಬರಗಾಲದಿಂದ ಆರ್ಥಿಕ ದುಸ್ಥಿತಿಗೆ ತಲುಪಿರುವ ರೈತರ ಸಾಲಮನ್ನಾ ಕುರಿತು ರಾಜ್ಯದಾದ್ಯಂತ ಬಿಸಿ ಬಿಸಿ ಚರ್ಚೆ ಹಾಗೂ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ. ಈ ಸಾಲಮನ್ನಾ ವಿಷಯವನ್ನೆ ಅಸ್ತ್ರವಾಗಿ ಬಳಸಿಕೊಂಡ ತಂದೆ ಮಕ್ಕಳಿಬ್ಬರು ನವಲಗುಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದ್ದು, ಅಪ್ಪ-ಮಗ ಇಬ್ಬರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಮೇ 31 ರಂದು ನವಲಗುಂದ ಸ್ಟೇಟ್ ಬ್ಯಾಂಕ್ ಇಂಡಿಯಾದ ಮುಖ್ಯ ದ್ವಾರದ ಕೀಲಿ ಮುರಿದು ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದ ಇಲ್ಲಿನ ನಾಗರಹಳ್ಳಿ ಗ್ರಾಮದ ಸುರೇಶ್ ಕುರಿ ಹಾಗೂ ಮಗ ರಾಜು ಕುರಿ ನಂತರ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ಬ್ಯಾಂಕಿನ ಎದುರು 'ಸಾಲಮನ್ನಾ ಮಾಡುವವರೆಗೂ ದರೋಡೆ ಕೃತ್ಯಗಳನ್ನು ಮುಂದುವರಿಸಲಾಗುವುದು' ಎಂದು ಕೈ ಬರಹದ ಫಲಕ ನೇತು ಹಾಕಿದ್ದರು![ಐಸ್ ಕ್ರೀಂ ಆಮಿಷವೊಡ್ಡಿ ಬಾಲಕಿ ಮೇಲೆ ಅತ್ಯಾಚಾರ ಯತ್ನ, ಆರೋಪಿ ಬಂಧನ]

ಅಲ್ಲದೆ ಬ್ಯಾಂಕಿನ ಪ್ರವೇಶ ಹಾಗೂ ಒಳಗಡೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಮಾಡಿದ್ದರು. ಪೊಲೀಸರು ಇದು ದರೋಡೆ ಪ್ರಕರಣ ಬೇರೆಡೆಗೆ ಸೆಳೆಯಲು ಮಾಡಿದ ಕೃತ್ಯ ಎಂಬ ಅನುಮಾನವನ್ನು ಆರಂಭದಿಂದಲೂ ಹೊಂದಿದ್ದರು.

ಘಟನೆಯ ಜಾಡು ಹಿಡಿದು ಹೊರಟ ಪೊಲೀಸರು ಒಂದು ವಾರದ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ನವಲಗುಂದದಲ್ಲಿಯೇ ವಾಸವಾಗಿದ್ದ ಇವರು ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದ ರೂವಾರಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.












Click it and Unblock the Notifications