Pilot Training: ಪೈಲೆಟ್ ಆಗಬೇಕು ಎನ್ನುವ ಉತ್ತರ ಕನ್ನಡ ಮಂದಿಗೆ ಗುಡ್‌ನ್ಯೂಸ್
ಹುಬ್ಬಳ್ಳಿ, ಮೇ 28: ಉತ್ತರ ಕರ್ನಾಟಕ ಭಾಗದಲ್ಲಿ ಪೈಲೆಟ್ ಆಗಬೇಕು ಎಂದು ಕನಸು ಕಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಏರ್ ಟ್ಯಾಕ್ಸಿ ಸಂಸ್ಥೆಯ ಭಾಗವಾಗಿರುವ ಏರ್ ಟ್ಯಾಕ್ಸಿ ಅಕಾಡೆಮಿಯು ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ 2024ರ ಜೂನ್ ತಿಂಗಳಲ್ಲಿ ಪೈಲಟ್ ಆಗಬೇಕು ಎಂದುಕೊಂಡವರ ಕನಸು ನನಸಾಗಿಸಲು ವಿಮಾನ ಚಾಲನೆ ತರಬೇತಿ ಪ್ರಾರಂಭಿಸಲಿದೆ.
ಮುಂದಿನ ತಿಂಗಳು ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ (FTO) ಆರಂಭವಾಗಲಿದ್ದು, ಪೈಲೆಟ್ ಆಗಬೇಕು ಎಂದುಕೊಂಡವರ ಕನಸಿಗೆ ಹೊಸ ರೆಕ್ಕೆ ಮೂಡಿದೆ. ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ ಎನ್ನುವುದು ಪೈಲಟ್ ಆಗಬೇಕು ಎನ್ನುವವರಿಗೆ ತರಬೇತಿ ನೀಡಿ, CPL (ವಾಣಿಜ್ಯ ಪೈಲಟ್ ಪರವಾನಗಿ) ಅಥವಾ PPL (ಖಾಸಗಿ ಪೈಲಟ್ ಪರವಾನಗಿ) ಪಡೆಯಲು ಹಾಗೂ ಭಾರತದಲ್ಲಿ ವಿಮಾನಯಾನ ಉದ್ಯಮಕ್ಕೆ ಸೇರಲು ನೆರವಾಗುತ್ತದೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಣೆ ಹೊರಡಿಸಿರುವ ಏರ್ ಟ್ಯಾಕ್ಸಿ ಅಕಾಡೆಮಿ 'ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜೂನ್ 2024ರಲ್ಲಿ ವೃತ್ತಿಪರ ಪೈಲಟ್ ತರಬೇತಿ ಅಕಾಡೆಮಿಯನ್ನು ತೆರೆಯಲಾಗುತ್ತಿದೆ' ಎಂದು ಅಧೀಕೃತವಾಗಿ ತಿಳಿಸಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಏರ್ ಟ್ಯಾಕ್ಸಿ ಅಕಾಡೆಮಿಯು ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ ಮೂಲಕ ಪೈಲೆಟ್ ಆಗಬೇಕು ಎನ್ನುವ ಆಸಕ್ತಿ ಇರುವವರಿಗೆ ಬೇಸಿಕ್ ಕೋರ್ಸ್‌ಗಳು ಮತ್ತು ಫ್ಲೈಯಿಂಗ್ ಕೋರ್ಸ್‌ಗಳ ತರಬೇತಿ ನೀಡಲಿದೆ. ಈ ಫ್ಲೈಯಿಂಗ್ ತರಬೇತಿಯು ವಾಣಿಜ್ಯ ಪೈಲಟ್ ಪರವಾನಗಿ (CPL), ಖಾಸಗಿ ಪೈಲಟ್ ಪರವಾನಗಿ (PPL) ಮತ್ತು ಕ್ಯಾಡೆಟ್ ಪೈಲಟ್ ಪ್ರೋಗ್ರಾಂ (CPP) ಜೊತೆಗೆ ತರಬೇತಿ ಪಡೆದ ಪೈಲೆಟ್‌ಗಳಿಗೆ ಉದ್ಯೋಗ ಪಡೆಯಲು ಕೂಡ ಸಹಾಯ ಮಾಡುತ್ತದೆ.
ಈ ತರಬೇತಿಯಲ್ಲಿ ನೀಡುವ ಬೇಸಿಕ್ ಕೋರ್ಸ್‌ಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್, ವಿಮಾನ ವ್ಯವಸ್ಥೆಗಳು ಅದರ ಕಾರ್ಯವಿಧಾನಗಳು ಹಾಗೂ ಎವಿಯೇಷನ್ ನಿಯಮಗಳನ್ನು ಹೇಳಿಕೊಡಲಾಗುತ್ತದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಏರ್ ಟ್ಯಾಕ್ಸಿ ಅಕಾಡೆಮಿಯು ಟೆಕ್ನಾಮ್ ಪಿ2006ಟಿ, ಟೆಕ್ನಾಮ್ ಪಿ-ಮೆಂಟರ್ ಮತ್ತು ಟೆಕ್ನಾಮ್ ಪಿ2010ಟಿಡಿಐ ವಿಮಾನಗಳನ್ನು ಒಳಗೊಂಡಂತೆ ಏಕ ಮತ್ತು ಬಹು-ಎಂಜಿನ್ ವಿಮಾನಗಳನ್ನು ಹೊಂದಿದ್ದು, ಪ್ರಯೋಗಾತ್ಮಕ ತರಬೇತಿಗಳು ಸಹ ನಡೆಯಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣವು ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಮತ್ತು ನೈಟ್ ಲ್ಯಾಂಡಿಂಗ್ ಸೌಲಭ್ಯಗಳನ್ನು ಒಳಗೊಂಡಂತೆ ಸುಧಾರಿತ ನ್ಯಾವಿಗೇಷನ್ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇಲ್ಲಿ ಉತ್ತಮ ಮಟ್ಟದಲ್ಲಿ ಪೈಲೆಟ್ ತರಬೇತಿಯನ್ನು ನೀಡಲು ಸಾಧ್ಯವಿದೆ. ಹೀಗಾಗಿ ಪೈಲೆಟ್ ಆಗಬೇಕು ಎಂದುಕೊಂಡವರು ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯುವ ಫ್ಲೈಯಿಂಗ್ ಟ್ರೈನಿಂಗ್‌ನಲ್ಲಿ ಭಾಗಿಯಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಏರ್ ಟ್ಯಾಕ್ಸಿ ಅಥವಾ ಏರ್ ಟ್ಯಾಕ್ಸಿ ಅಕಾಡೆಮಿ ಸಂಸ್ಥೆಯನ್ನು ಸಂಪರ್ಕಿಸಬಹುದು.












Click it and Unblock the Notifications