ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ನಟಿ ಶೃತಿ ಅಬ್ಬರದ ಪ್ರಚಾರ
ಹುಬ್ಬಳ್ಳಿ, ಮೇ, 01: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಸಿನಿ ಸ್ಟಾರ್‌ಗಳು ಪ್ರಚಾರಕ್ಕೆ ಇಳಿದಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ನಟಿ ಶೃತಿ ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಅಲ್ಲದೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಾ ಇದೆ, ಆ ಪಕ್ಷದ ವಾರಂಟಿ ಕಾರ್ಡ್ ಮುಗಿದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಪರವಾಗಿ ಮತಯಾಚನೆ ಮಾಡಿದ ನಟಿ ಶೃತಿ, ಕ್ಷೇತ್ರದ ಹೂಗಾರ ಓಣಿಯಲ್ಲಿ ಭರ್ಜರಿ ಮತಬೇಟೆ ಮಾಡಿದರು. ಈ ವೇಳೆ ನಟಿ ಶೃತಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡ ಸಾಥ್ ನೀಡಿದರು.

ಇನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಟಿ ಶೃತಿ, ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡಿದರು, ಆದರೆ ಅದು ಭಾರತ ಯಾತ್ರೆ ಆಗಿತ್ತು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ನೀಡುತ್ತಾ ಇದೆ, ಆ ಪಕ್ಷದ ವಾರಂಟಿ ಕಾರ್ಡ್ ಮುಗಿದಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ 75 ಹೊಸ ಮುಖಗಳಿಗೆ ಅವಕಾಶ ಕೊಟ್ಟಿದೆ. ಸುರಕ್ಷಿತ ವಾತಾವರಣ ಬೇಕಾದರೆ ಒಳ್ಳೆಯ ಸರ್ಕಾರ ಇರಬೇಕು. ಆದ್ದರಿಂದ ಬಿಜೆಪಿಗೆ ಮತ ಹಾಕಿ ಸ್ಥಿರ ಸರ್ಕಾರವನ್ನು ಜಾರಿಗೆ ತನ್ನಿ. ದೇಶದಲ್ಲಿ ಕೈ ಬಲಪಡಿಸಬೇಕಾದರೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಜನರಿಗೆ ಮನವಿ ಮಾಡಿದರು.
ಸುಧಾಕರ್ ಪರ ಸಿನಿ ಸ್ಟಾರ್‌ಗಳ ಪ್ರಚಾರ
ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರದ ಕಾವು ಏರತೊಡಗಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಾದ್ಯಂತ ಓಡಾಡಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ರಣಕಣದಲ್ಲಿ ಚಿತ್ರರಂಗದ ತಾರೆಯರ ಆಗಮನದಿಂದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಚುನಾವಣಾ ಹುಮ್ಮಸ್ಸು ಹೆಚ್ಚಾಗಿದೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕ್ಷೇತ್ರ ಚಿಕ್ಕಬಳ್ಳಾಪುರ. ಕಾರಣ ಡಾ.ಕೆ.ಸುಧಾಕರ್ ಪ್ರತಿನಿಧಿಸುತ್ತಿರುವ ಕ್ಷೇತ್ರ ಆಗಿರುವುದರಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚಿತ್ರರಂಗದ ಕಿರುತೆರೆ ಹಾಗೂ ಸಿನಿಮಾ ನಟ, ನಟಿಯರು ಪ್ರಚಾರದಲ್ಲಿ ಕಾರ್ಯನಿರತರಾಗಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ನಟಿ ಹರ್ಷಿಕಾ ಪೂಣಚ್ಚ, ನಟ ರಘು ಮುಖರ್ಜಿ ಹೀಗೆ ನಟ-ನಟಿಯರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಚುನಾವಣೆಯಂತೆ ಈ ಬಾರಿಯೂ ಚಿತ್ರರಂಗದ ಕಲಾವಿದರ ದಂಡೇ ಮತ ಪ್ರಚಾರದಲ್ಲಿ ತೊಡಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಜಿಲ್ಲಾದ್ಯಂತ ಸ್ಟಾರ್ ಪ್ರಚಾರಕರ ಅಬ್ಬರವೂ ಜೋರಾಗಲಿದೆ.
ಪ್ರತಿ ನಿತ್ಯ ಬೆಳ್ಳಂಬೆಳಗ್ಗೆ 8 ಗಂಟೆಯಿಂದಲೇ ಕಿರುತೆರೆ ಮತ್ತು ಚಲನಚಿತ್ರ ತಾರೆಯರಾದ ದಿಗಂತ್, ಅನು ಪ್ರಭಾಕರ್, ರಘು ಮುಖರ್ಜಿ, ನಟಿ ಹರ್ಷಿಕಾ ಪೂಣಚ್ಚ, ದಿವ್ಯ ಉರುಡುಗ ಹೀಗೆ ಹಲವು ಕಲಾವಿದರು ಕ್ಷೇತ್ರದಲ್ಲಿ ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾವಿದರು ಪ್ರಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮನೆ ಮನೆಗೆ ತೆರಳಿ ಪ್ರಚಾರ
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪರ ಕ್ಷೇತ್ರದ ವಿವಿಧಡೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರೆ, ಮತ್ತೊಂದೆಡೆ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಕಿರುತೆರೆ ಮತ್ತು ಚಲನಚಿತ್ರ ತಾರೆಯರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಕುಡಿಯುವ ನೀರು, ಬಯಲುಸೀಮೆಯ ಬರಡು ನೆಲದ ಕೆರೆಗಳಿಗೆ ಹೆಚ್‌ಎನ್ ವ್ಯಾಲಿಯ ನೀರು ತಂದಿರುವುದು, ಮೆಡಿಕಲ್ ಕಾಲೇಜು, ಮನೆ ಬಳಿಗೆ ಶಾಂತ ಮೊಬೈಲ್ ಕ್ಲಿನಿಕ್‌ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ತಜ್ಞ ವೈದ್ಯರಿಂದ ಆರೋಗ್ಯ ಮತ್ತು ಉಚಿತ ಔಷಧಗಳ ವಿತರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿ ಮತ ನೀಡುವಂತೆ ಮನವಿ ಮಾಡುವಲ್ಲಿ ನಿರತರಾಗಿದ್ದಾರೆ.
ಸುಧಾಕರ್ ಪರ ಭರ್ಜರಿ ಮತಬೇಟೆ
ಕ್ಷೇತ್ರದ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಂಬೆಳಗ್ಗೆ ತಾವು ಪ್ರಚಾರ ಮಾಡುವ ವ್ಯಾಪ್ತಿಯ ಸ್ಥಳೀಯ ಮುಖಂಡರ ಜೊತೆ ಕರಪತ್ರಗಳನ್ನು ಹಿಡಿದು ಮನೆ ಮನೆಗೂ ತೆರಳಿ ಡಾ.ಕೆ.ಸುಧಾಕರ್ ಪರ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಮತದಾರರು ಕೂಡ ಸೆಲೆಬ್ರೆಟಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಮತ್ತಷ್ಟು ಖ್ಯಾತ ನಟರ ಆಗಮನ ಸಾಧ್ಯತೆ
ಕ್ಷೇತ್ರದಲ್ಲಿ ಈಗಾಗಲೇ ಬೀಡು ಬಿಟ್ಟಿರುವ ಸೆಲಬ್ರಟಿಗಳ ಜೊತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಘಟಾನುಘಟಿ ಚಲನಚಿತ್ರ ನಟ, ನಟಿಯರು ಆಗಮಿಸಿ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವರು ಪ್ರಚಾರಕ್ಕೆ ಆಗಮಿಸುತ್ತಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳೂ ಈಗಾಗಲೇ ನಡೆದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ತೆಲುಗು ರಾಜ್ಯದ ನಂಟು ಹೆಚ್ಚಿದ್ದು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಿಗೆ ಖ್ಯಾತ ತೆಲುಗು ನಟ ಪವನ್ ಕಲ್ಯಾಣ್, ಸಾಯಿ ಕುಮಾರ್ ಸೇರಿದಂತೆ ಹಲವರು ನಟ-ನಟಿಯರು ಆಗಮಿಸಲಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.












Click it and Unblock the Notifications