ಗಮನ ಸೆಳೆದ ಹುಬ್ಬಳ್ಳಿ ತಹಶೀಲ್ದಾರ್ 100 ದಿನದ ಪ್ರವಾಸ!
ಹುಬ್ಬಳ್ಳಿ, ಸೆಪ್ಟೆಂಬರ್, 04: ಹುಬ್ಬಳ್ಳಿಯ ತಹಶೀಲ್ದಾರ್ 'ವಿದ್ಯಾವಂತರಾಗಿ, ಸಬಲರಾಗಿ'ಎಂಬ ಉತ್ತಮ ಸಂದೇಶವನ್ನು ಹೊತ್ತು ದೇಶಾದ್ಯಂತ ಬೈಕ್ ರೈಡ್ ಅನ್ನು ಕೈಗೊಂಡಿದ್ದಾರೆ. ದೇಶವಾಸಿಗಳು ವಿದ್ಯಾವಂತರಾಗಬೇಕು, ಇದರಿಂದ ಸಬಲರಾಗುದಷ್ಟೇ ಅಲ್ಲ, ದೇಶ ಕೂಡ ಸಬಲವಾಗುತ್ತದೆ ಎಂಬ ಸಂದೇಶ ಸಾರುವ ಮಹತ್ತರ ಕಾರ್ಯಕ್ಕಾಗಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ದೇಶಾದ್ಯಂತ ಸಂಚರಿಸುತ್ತಿದ್ದಾರೆ.
ಶಶಿಧರ ಮಾಡ್ಯಾಳ 30,000 ಕಿಲೋ ಮೀಟರ್ ಕ್ರಮಿಸುವ ಗುರಿಯೊಂದಿಗೆ 100 ದಿನಗಳ ಕಾಲ ಭಾರತದಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಅವರ ಪ್ಯಾನ್-ಇಂಡಿಯಾ ಪ್ರವಾಸದ ಸಮಯದಲ್ಲಿ, ಡುಕಾಟಿ ಮಲ್ಟಿಸ್ಟ್ರಾಡಾ 1,260 ಬೈಕ್‌ಗಳಲ್ಲಿ 24 ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ 23 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, 54 ಗಡಿ ಪ್ರದೇಶಗಳು ಮತ್ತು 24 ಗಡಿ ಗ್ರಾಮಗಳನ್ನು ಭೇಟಿ ಮಾಡಲಿದ್ದಾರೆ. ಅವರು ಆಗಸ್ಟ್ 21ರಂದು ಬಸವೇಶ್ವರರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಿಂದ ತಮ್ಮ ರೈಡ್ ಅನ್ನು ಪ್ರಾರಂಭಿಸಿದ್ದರು. ಡಿಸೆಂಬರ್ 3 ಮತ್ತು 5ರ ನಡುವೆ ತಮ್ಮ ಪ್ಯಾನ್-ಇಂಡಿಯಾ ರೈಡ್ ಅನ್ನು ಮುಗಿಸುವ ನಿರೀಕ್ಷೆಯಲಿದ್ದಾರೆ.
ಈಗಾಗಲೇ ಪಣಜಿ, ರತ್ನಗಿರಿ, ನವ ಮುಂಬೈ, ಗೇಟ್ವೇ ಆಫ್ ಇಂಡಿಯಾ, ಡಾ. ಬಿ. ಆರ್. ಅಂಬೇಡ್ಕರ್ ನಗರ, ಧಾರ್, ಮಹುವ ಮತ್ತು ಸೋಮನಾಥ್‌ಗೆ ಭೇಟಿ ನೀಡಿದ್ದಾರೆ. ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ವಿನಾಯಕ್ ಖೇಡೇಕರ್ ಅವರನ್ನು ಅಂಕೋಲಾ ಮತ್ತು ಪಣಜಿಯಲ್ಲಿ ಭೇಟಿ ಮಾಡಿದ್ದಾರೆ.

ಪ್ಯಾನ್-ಇಂಡಿಯಾ ರೈಡ್‌ಗೆ ತಯಾರಿ ಹೇಗೆ?
ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, "ಒಂದು ಕಾರಣಕ್ಕಾಗಿ ಸವಾರಿ ಮಾಡುವುದು ನನ್ನ ಗುರಿ ಆಗಿದೆ. ಅನೇಕ ಹಿರಿಯ ಅಧಿಕಾರಿಗಳು ಮತ್ತು ಇತರರೊಂದಿಗೆ ಸಮಾಲೋಚಿಸಿದ ನಂತರ ಪ್ಯಾನ್-ಇಂಡಿಯಾ ರೈಡ್ ಮಾಡಲು ನಿರ್ಧರಿಸಿದ್ದೇವೆ. ನಾನು ಈ ಹಿಂದೆ ಬೈಕ್ ರೈಡ್ ಹೋಗುವ ಸ್ನೇಹಿತನೊಂದಿಗೆ ಯೋಜನೆಯೊಂದನ್ನು ರೂಪಿಸಿದ್ದೆ. ಗಮ್ಯಸ್ಥಾನಗಳು ಮತ್ತು ಯಾರನ್ನು ಭೇಟಿ ಆಗಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದೆ. ನಂತರ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಿಸಿದ ರಾಷ್ಟ್ರಧ್ವಜಗಳನ್ನು ಪ್ರಸ್ತುತಪಡಿಸಲು ರಸ್ತೆ ನಕ್ಷೆಯನ್ನು ವಿನ್ಯಾಸಗೊಳಿಸಿದೆ" ಎಂದು ಹೇಳಿದರು.

ಹುಬ್ಬಳ್ಳಿ ತಹಶೀಲ್ದಾರ್ 100 ದಿನಗಳ ಯಾತ್ರೆ
'ಶಿಕ್ಷಿತರಾಗಿ, ಸಬಲರಾಗಿ ಎಂಬ ವಿಷಯಕ್ಕಾಗಿ ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಲು ನಿರ್ಧರಿಸಿದ್ದೇನೆ. ಅವರಲ್ಲಿ ಅನೇಕರು ಆದಿವಾಸಿಗಳು ಇತರರ ಶಿಕ್ಷಣ ಮತ್ತು ಉನ್ನತಿಗಾಗಿ ಶ್ರಮಿಸಿದ್ದಾರೆ,' ಎಂದು ಹೇಳಿದರು. ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಮೊದಲಾದವರು ಓದಿದ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡಲು ಯೋಜಿಸಿದ್ದರು. 100 ದಿನಗಳ ಯಾತ್ರೆಯಲ್ಲಿ ದೇಶದ ಗಡಿ ಭಾಗದ ಗ್ರಾಮಗಳಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು. "ನಾನು ಗಡಿಯಲ್ಲಿ ಬಿಎಸ್ಎಫ್ ಯೋಧರನ್ನು ಭೇಟಿ ಮಾಡಿ ಅವರೊಂದಿಗೆ ಸ್ವಲ್ಪ ಸಮಯ ಕಳೆಯುತ್ತೇನೆ. ನಂತರ ವಾಘಾ ಗಡಿ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುತ್ತೇನೆ. ದಿನಕ್ಕೆ ಸರಾಸರಿ 400 ಕಿಲೋ ಮೀಟರ್ ಪ್ರಯಾಣಿಸುತ್ತೇನೆ" ಎಂದು ಹೇಳಿದರು.

ಶಶಿಧರ್ ಬಗ್ಗೆ ವಿನಾಯಕ ಖೇಡೇಕರ್ ಅಭಿಪ್ರಾಯ
ನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ತಜ್ಞ ವಿನಾಯಕ ಖೇಡೇಕರ್ ಮಾತನಾಡಿ, ಮಾಡ್ಯಾಳ್ ಅವರ 'ಶಿಕ್ಷಿತರಾಗಿ, ಸಬಲರಾಗಿ'ಯೋಜನೆಯ ಪ್ರಯತ್ನ ಇಂದಿನ ದಿನಕ್ಕೆ ಅಗತ್ಯವಾಗಿದೆ. "ಶಿಕ್ಷಣವು ಇನ್ನೂ ತೃಪ್ತಿಕರ ಮಟ್ಟವನ್ನು ತಲುಪಿಲ್ಲ. ಮತ್ತು ಇಂತಹ ಅಭಿಯಾನವು ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದರು.

ಈ ಕಾರ್ಯಕ್ಕೆ ಅತಿಯಾದ ಗೌರವ ಸಿಗುತ್ತಿದೆ
ಇನ್ನೂ ಒನ್ ಇಂಡಿಯಾದೊಂದಿಗೆ ಮಾತನಾಡಿದ ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, "ನನ್ನ ಈ ದೇಶ ಪರ್ಯಟನೆಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿ ನಗರದಲ್ಲೂ ನಮ್ಮ ಪ್ರವಾಸಕ್ಕೆ ಉತ್ತಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೋದ ಕಡೆ ಪ್ರವಾಸದ ಬಗ್ಗೆ ಕೇಳಿದ ಜನರು ಉತ್ಸಾಹದಿಂದ ನನಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ಅಲ್ಲದೇ ಈ ಮಹತ್ತರ ಕಾರ್ಯಕ್ಕೆ ಅತಿಯಾದ ಗೌರವವನ್ನು ಕೂಡ ನೀಡುತ್ತಿದ್ದಾರೆ" ಸಂತೋಷ ವ್ಯಕ್ತಪಡಿಸಿದರು.












Click it and Unblock the Notifications