ಲಾಂಬೋರ್ಗಿನಿ ಕನಸು ಕಂಡ ಬಾಲಕನ ಕ್ಯಾನ್ಸರ್ ಚಿಕಿತ್ಸೆಗೆ ನೆರವು ಬೇಕಿದೆ
'ದೊಡ್ಡವನಾದ ಮೇಲೆ ಏನ್ಮಾಡ್ಬೇಕು ಅಂದುಕೊಂಡಿದ್ದೀಯಾ? ನಿನ್ನ ಕನಸೇನು? ' ಎಂದು ಕೇಳಿದಾಗ 7 ವರ್ಷದ ಬಾಲಕ ಕೊಟ್ಟ ಉತ್ತರ ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಒಂದು ದಿನ ನಾನು ಲ್ಯಾಂಬೋರ್ಗಿನಿ ಕಾರು ಕೊಳ್ಳುತ್ತೇನೆ. ಅದರಲ್ಲಿ ನನ್ನ ಅಪ್ಪನನ್ನು ಕೂರಿಸಿಕೊಂಡು ಲಾಂಗ್ ಡ್ರೈವ್ ಹೋಗುತ್ತೇನೆ ಎಂದಿದ್ದ ಬಾಲಕನ ಬದುಕಿನಲ್ಲಿ ಅಚ್ಚರಿಗಳಿಗಿಂತ ಆಘಾತವೇ ಹೆಚ್ಚಾಗಿ ಕಾಡುತ್ತಿದೆ. ಅಧಿರಾಜ್ ಬದುಕಿನಲ್ಲಿ ಉಂಟಾದ ಬದಲಾವಣೆಯಿಂದ ಆತನ ತಂದೆ ತಾಯಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಾರಣಾಂತಿಕ ಕಾಯಿಲೆಗೆ ಅಧಿರಾಜ್ ತುತ್ತಾಗಿದ್ದು, ವಿಧಿಯಿಲ್ಲದೆ ನೆರವಿಗಾಗಿ ಬೇಡುವ ಪರಿಸ್ಥಿತಿ ಬಂದೊದಗಿದೆ.
ಒಂದು ದಿನ ಅಧಿರಾಜ್ ಬೆನ್ನಲ್ಲಿ ಸಣ್ಣಗೆ ನೋವು ಕಾಣಿಸಿಕೊಂಡಿತ್ತು. ತುಂಬಾ ವಾಚಾಳಿ, ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಅಧಿರಾಜ್ ಮುಖದಲ್ಲಿ ನಗೆ ಮಾಯವಾಯಿತು, ಐಷಾರಾಮಿ ಕಾರಿನ ಕನಸು ಮಂಕಾಗ ತೊಡಗಿತು. ಆರಂಭದಲ್ಲಿ ದೊಡ್ಡ ಪ್ರಮಾಣದ ಕಾಯಿಲೆ ಇರುವ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿರಲಿಲ್ಲ. ಆದರೆ, ಅಧಿರಾಜ್ ಅವರ ನಡವಳಿಕೆಯಲ್ಲಿ ನಿರಂತರವಾಗಿ ಬದಲಾವಣೆ ಕಂಡು ಬರುತ್ತಿತ್ತು. ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ, ಬಲಗಾಲು ಸ್ವಾದೀನ ಕಳೆದುಕೊಂಡಂತೆ ಆಗಾಗ ಕುಸಿದು ಬೀಳತೊಡಗಿದ, ಕೊನೆ ಹಾಸಿಗೆ ಹಿಡಿಯುವಂತಾಯಿತು. ಮಗನ ಪರಿಸ್ಥಿತಿ ಕಂಡು ಗಾಬರಿಗೊಂಡ ತಂದೆ ತಾಯಿ, ವಿವಿಧ ವೈದ್ಯಕೀಯ ಪರೀಕ್ಷೆಗೆ ಅಧಿರಾಜ್ ನನ್ನು ಒಳಪಡಿಸಿದರು.
Recommended Video
ಮೆಡಿಕಲ್ ರಿಪೋರ್ಟ್ ನೋಡುತ್ತಿದ್ದಂತೆ ಅಧಿರಾಜ್ ತಂದೆ ತಾಯಿಯ ಜಂಘಾಬಲವೇ ಕುಸಿಯತೊಡಗಿತು. ಆ ಮಗುವಿಗೆ ರಕ್ತದ ಕ್ಯಾನ್ಸರ್ (Acute Lymphoblastic Leukemia) ಇದೆ ಎಂಬುದು ಸ್ಪಷ್ಟವಾಯಿತು. ಅಧಿರಾಜ್ ನ ಕೇಂದ್ರ ನರವ್ಯೂಹ(ಸಿಎನ್ಎಸ್) ಕ್ಕೆ ನೇರವಾಗಿ ಬಾಧೆ ಆರಂಭವಾಯಿತು. ಕೈ ಕಾಲು ಸ್ವಾಧೀನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಕಾಲುಗಳ ಸ್ಪರ್ಶಜ್ಞಾನವೆ ಕುಂದತೊಡಗಿತು. ಗಾಯದ ಮೇಲೆ ಬರೆ ಎಳೆದಂತೆ ಬಿಳಿ ರಕ್ತ ಕಣ(WBC)ಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿದು ಅಪಾಯದ ಮಟ್ಟ ಮುಟ್ಟ ತೊಡಗಿತು. ಅಧಿರಾಜ್ ದೇಹ ಮಾರಣಾಂತಿಕ ಕಾಯಿಲೆಗಳ ಸೋಂಕಿಗೆ ಆಹ್ವಾನ ನೀಡುವಂತಾಯ್ತು.

ಅಧಿರಾಜ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆ ತರಲಾಯಿತು. ಜಬಲ್ ಪುರ್ ತಜ್ಞ ವೈದ್ಯರ ನೆರವು ಪಡೆಯಲಾಯಿತು. 52 ವಾರಗಳ ಕಿಮೋಥೆರಪಿ ಅನಿವಾರ್ಯವಾಯಿತು. ಪ್ರತಿ ಕಾರ್ಮೋಡದಲ್ಲೂ ಬೆಳ್ಳಿರೇಖೆ ಮೂಡುವಂತೆ ಅಧಿರಾಜ್ ತಂದೆ ತಾಯಿಗೂ ಮಾನಸಿಕ ಬಲ ತುಂಬಬಲ್ಲ ಬೆಳವಣಿಗೆ ಕಂಡು ಬಂದಿತು. ಚಿಕಿತ್ಸೆಗೆ ಅಧಿರಾಜ್ ಸೂಕ್ತವಾಗಿ ಸ್ಪಂದಿಸ ತೊಡಗಿದ ಮೇಲೆ ಕಾಲುಗಳ ಸ್ವಾದೀನ ಮರುಕಳಿಸಿತು. ಕಾಲುಗಳನ್ನು ಮಡಚಿ, ಎತ್ತಿಯಿಡಲು ತೆವಳಲು ಸಾಧ್ಯವಾಯಿತು.

ಸದ್ಯ 52 ವಾರಗಳ ಪೈಕಿ 22 ವಾರಗಳ ಕಿಮೋಥೆರಪಿ ಸಾಧಿಸಲಾಗಿದೆ. ಆದರೆ ಅಧಿರಾಜ್ ತಂದೆ ಸಂಜಯ್ ಅವರ ಉಳಿತಾಯದ ಮೊತ್ತವೆಲ್ಲ ಆಸ್ಪತ್ರೆಗೆ ಖರ್ಚಿಗೆ ಸರಿ ಹೊಂದಿಸುವಲ್ಲಿ ಸಾಕಾಗಿದೆ. ಶಿಕ್ಷಕ ವೃತ್ತಿಯಲ್ಲಿರುವ ಸಂಜಯ್ ಅವರು ತಿಂಗಳಿಗೆ 20,000 ರು ಗಳಿಸುತ್ತಿದ್ದಾರೆ. ಆದರೆ ಈಗ ಮಗನ ಆರೈಕೆಗಾಗಿ ವೇತನ ವಿಲ್ಲದ ರಜೆ ಮೇಲಿದ್ದಾರೆ. ಮುಂಬೈನಲ್ಲಿ ಮಗನ ಚೇತರಿಕೆಗಾಗಿ ಯತ್ನಿಸುತ್ತಿದ್ದಾರೆ. ಜಬಲ್ ಪುರ್ ನಲ್ಲಿ ಮಗಳ ಶಾಲೆ ಖರ್ಚು ವೆಚ್ಚ, ಅಧಿರಾಜ್ ಚಿಕಿತ್ಸೆಗಾಗಿ ಖರ್ಚು ವೆಚ್ಚ ಎಲ್ಲವೂ ಸಂಜಯ್ ತಿವಾರಿಯ ಜೇಬಲ್ಲಿ ಬರಿದಾಗಿಸಿವೆ. 52 ವಾರಗಳ ಕಿಮೋಥೆರಪಿ ಪೂರ್ಣಗೊಳಿಸಲು 9 ಲಕ್ಷ ರು ಕಡಿಮೆ ಬೀಳುತ್ತಿದೆ.

ನೀವು ಹೇಗೆ ನೆರವಾಗಬಹುದು...
ಯಾವುದೇ ಕೆಲಸವನ್ನು ಕೈ ಹಿಡಿದು ಪೂರ್ಣಗೊಳಿಸದೆ ಬಿಡುವುದು ಸರಿಯಾಗುವುದಿಲ್ಲ, ಅದರಲ್ಲೂ ನಿಮ್ಮ ಮಕ್ಕಳ ಜೀವನ್ಮರಣದ ಪ್ರಶ್ನೆ ಎದುರಾದರೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡದೆ ಯಾರು ಸುಮ್ಮನೆ ಕೂರುವುದಿಲ್ಲ. ಅಧಿರಾಜ್ ತಂದೆ ತಾಯಿ ಕೂಡಾ ಈಗ ಅದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಧಿರಾಜ್ ಇನ್ನೇನು ಸಂಪೂರ್ಣ ಗುಣಮುಖನಾಗುವ ಕುರುಹು ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿದ್ದು, ಅಧಿರಾಜ್ ಗೆ ಮರುಜನ್ಮ ನೀಡಲು ನೆರವು ಕೋರಿದ್ದಾರೆ. ಈಗ ನೀವು ನೀಡುವ ನೆರವಿನ ಮೇಲೆ ಅಧಿರಾಜ್ ಕುಟುಂಬ ಸಂಪೂರ್ಣ ಭರವಸೆ ಇರಿಸಿಕೊಂಡಿದೆ. ಹೀಗಾಗಿ, ಉದಾರವಾಗಿ ಈ ಮಗುವಿನ ಆರೋಗ್ಯ ಸುಧಾರಣೆಗಾಗಿ ಆರ್ಥಿಕ ನೆರವು ನೀಡಿ, ಇಲ್ಲಿ ತನಕ ಮಾಡಿರುವ ಪ್ರಯತ್ನ ವ್ಯರ್ಥವಾಗದಂತೆ ನೋಡಿಕೊಳ್ಳಿ. ಅಧಿರಾಜ್ ಗೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications