Haveri Lok Sabha Constituency: ಹಾವೇರಿಯಲ್ಲಿ ಹರುಡುವುದು ಕಮಲದ ಕಂಪೋ: ಗ್ಯಾರಂಟಿ ಛಾಪೋ?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮೂರು ಮಾಜಿ ಮುಖ್ಯಮಂತ್ರಿಗಳು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಒಬ್ಬರು ಬೆಳಗಾವಿಯಿಂದ, ಇನ್ನೊಬ್ಬರು ಮಂಡ್ಯದಿಂದ ಕಣಕ್ಕೆ ಇಳಿದರೆ, ಗದಗ-ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಗದಗ ಹಾವೇರಿ ಲೋಕಸಭಾ ಕ್ಷೇತ್ರ ರಚನೆ ಆದಾಗಿನಿಂದಲೂ ಬಿಜೆಪಿ ಈ ಭಾಗದಲ್ಲಿ ತನ್ನ ಬಿಗಿ ಹಿಡಿತ ಸಾಧಿಸಿದೆ. ಈ ಕ್ಷೇತ್ರದಿಂದ ಸತತ ಮೂರು ಬಾರಿ ಲೋಕಸಭೇ ಪ್ರವೇಶಿಸಿದ್ದ ಸಿಎಂ ಉದಾಸಿ ಅವರ ಪುತ್ರ ಶಿವಕುಮಾರ್ ಉದಾಸಿ, ಈ ಬಾರಿ ಚುನಾವಣೆಯಿಂದ ಹಿಂದೆ ಸರೆದಿದ್ದಾರೆ. ಇವರ ಬದಲಿಗೆ ಬಿಜೆಪಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ.

ಎರಡನೇ ಪೀಳಿಗೆಯ ರಾಜಕಾರಣ
ಈ ಕ್ಷೇತ್ರದಲ್ಲಿ ಈ ಬಾರಿ ಭಾರೀ ಲೆಕ್ಕಾಚಾರವನ್ನು ಮಾಡಿ ಕಾಂಗ್ರೆಸ್ ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದೇವರಮಠಗೆ ಟಿಕೆಟ್ ನೀಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯ ಕಾರ್ಡ್ ಪ್ಲೇ ಮಾಡಿದ್ದು ರೋಚಕತೆ ಹೆಚ್ಚಿಸಿದೆ. ಈ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಈ ಕಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿರುವುದು ಸುಳ್ಳಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಆದರೆ ಬಿಜೆಪಿ ಈ ಆರೋಪಗಳನೆಲ್ಲಾ ಸುಳ್ಳು ಎಂದು ಹೇಳುತ್ತಾ ತನ್ನ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದೆ.

ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಿಲಕಿಲ
ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದು ಕೊಂಡಿದ್ದು, ಬಿಜೆಪಿ ಕೇವಲ ಒಂದು ಸ್ಥಾನವನ್ನು ಪಡೆದಿದೆ. ಆದರೆ ರಾಜ್ಯ ರಾಜಕಾರಣವೇ ಬೇರೆ ಹಾಗೂ ಕೇಂದ್ರ ರಾಜಕಾರಣವೇ ಬೇರೆ ಎಂದು ಕ್ಷೇತ್ರದ ಮತದಾರ ಹೇಳುತ್ತಿದ್ದಾರೆ. ಮೇಲ್ನೋಟಕ್ಕಂತೂ ಬಸವರಾಜ್ ಬೊಮ್ಮಾಯಿ ಸುಲಭವಾಗಿ ಗೆಲ್ಲಬಹುದು ಎಂದು ತೋರುತ್ತದೆ. ಆದರೆ, ಕಾಂಗ್ರೆಸ್ ಇವರ ಪ್ಲ್ಯಾನ್ ಉಲ್ಟಾ ಮಾಡಲು ಬೇಕಾದ ಎಲ್ಲ ರಾಜಕೀಯ ಕಸರತ್ತುಗಳನ್ನು ನಡೆಸಿದೆ.
ಗೆಲುವಿಗೆ ನಿರ್ಣಾಯಕರು ಯಾರು?
ಹಾವೇರಿ ಜಿಲ್ಲೆಯಲ್ಲಿ ಬೊಮ್ಮಾಯಿ ಅವರ ಪ್ರಭಾವವನ್ನು ತೆಗೆದು ಹಾಕುವಂತಿಲ್ಲ. ಆದರೆ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರು ಇದ್ದು, ತಮ್ಮ ವರ್ಚಸ್ಸನ್ನು ಚುನಾವಣೆಯಲ್ಲಿ ಪಣಕ್ಕೆ ಇಟ್ಟಂತೆ ಕಾಣುತ್ತಿದೆ. ಅಹಿಂದ ಹಾಗೂ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಲ್ಲಿ ಮಂದಹಾಸ ಮೂಡಿಸಿದರೆ, ವೀರಶೈವ ಲಿಂಗಾಯತ, ಹಿಂದೂಳಿದ ಮತ್ತು ದಲಿತ, ಬಲಗೈ ಮತಗಳು ಕಮಲ ಪಡೆಯ ಬುಟ್ಟಿಯಲ್ಲಿವೆ ಎಂಬ ಸಮಾಧಾನ ಇಟ್ಟುಕೊಂಡಿದೆ.
ವೀರಶೈವ ಲಿಂಗಾಯತ, ಕುರುಬ, ಮುಸ್ಲೀಂ ಮತ್ತು ದಲಿತ ಸಮುದಾಯದ ಮತಗಳು ನಿರ್ಣಾಯಕ. ಆದರೆ ಸಣ್ಣ ಸಮುದಾಯಗಳೇ ಗೆಲುವಿನ ಅಂತರವನ್ನು ನಿರ್ಧರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications