ಹಾವೇರಿಯಲ್ಲಿ ಮಳೆಗಾಗಿ ದೇವರಿಗೆ ಹೋಳಿಗೆ ಪೂಜೆ!
ಹಾವೇರಿ, ಜುಲೈ 16 : ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹಾವೇರಿಯಲ್ಲಿ ಮಳೆಗಾಗಿ ದೇವರಿಗೆ ಹೋಳಿಗೆ ಪೂಜೆ ಮಾಡಲಾಗಿದೆ.
ಹಾವೇರಿ ನಗರದ ಪ್ಯಾಟಿ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ಸೋಮವಾರ ಹೋಳಿಗೆ ಪೂಜೆ ನಡೆಯಿತು. ಮಳೆ ಬಾರದೇ ಇದ್ದಾಗ ಬಸವೇಶ್ವರ ದೇವರಿಗೆ ಹೋಳಿಗೆ ಪೂಜೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.
ಬಸವೇಶ್ವರ ದೇವರ ಮೂರ್ತಿಯನ್ನು 150 ಹೋಳಿಗೆಗಳಿಂದ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. 25 ಕೆಜಿ ಬೆಲ್ಲ, 15 ಕೆಜಿ ಮೈದಾ ಹಿಟ್ಟು, 15 ಕೆಜಿ ಕಡಲೆ ಬೇಳೆಯಿಂದ ಹೋಳಿಗೆ ತಯಾರು ಮಾಡಲಾಗಿತ್ತು.

ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಮಳೆಯಾಗಿಲ್ಲ. ವ್ಯವಸಾಯವನ್ನು ನಂಬಿರುವ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ, ಹಾವೇರಿ ಜನರು ವರುಣನ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.
ಮಳೆಯಾಗದಿದ್ದಾಗ ಪ್ಯಾಟಿ ಬಸವೇಶ್ವರ ದೇವಾಲಯದಲ್ಲಿ ಹೋಳಿಗೆ ಪೂಜೆ ಮಾಡಿದರೆ ಮಳೆಯಾಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ, ಜನರು ಇಂದು ಪೂಜೆ ನಡೆಸಿದ್ದಾರೆ.












Click it and Unblock the Notifications