ಶಿಗ್ಗಾಂವಿ ಕ್ಷೇತ್ರದ ಚುನಾವಣೆ ಫಲಿತಾಂಶ 2023: ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದರೂ, ಬಸವರಾಜ ಬೊಮ್ಮಾಯಿಗೆ ಭರ್ಜರಿ ಗೆಲುವು
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಶನಿವಾರ, ಮೇ 13) ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಬಹುತೇಕ ಸರಳ ಬಹುಮತದತ್ತ ದಾಪುಗಾಲಿಟ್ಟಿದೆ.
ಇನ್ನು ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದರೂ, ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ 19,000 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಬಸವರಾಜ ಬೊಮ್ಮಾಯಿ ಗೆಲುವಿನ ನಗೆ ಬೀರಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ 63,384 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಯಾಸೀರ್ ಖಾನ್ ಪಠಾಣ್ 44,394 ಮತಗಳನ್ನು ಪಡೆದಿದ್ದಾರೆ.
ಇನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು 2008ರಲ್ಲಿ ಬಿಜೆಪಿ ಪರ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಕ್ಕೂ ಮುನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. ಕಳೆದ 11 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಬಾರಿ ಗೆದ್ದಿದ್ದರೆ, ಬಿಜೆಪಿ ಮೂರು ಬಾರಿ ಮತ್ತು ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದಾರೆ.

2018ರಲ್ಲಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ನ ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು 9,265 ಮತಗಳ ಅಂತರದಿಂದ ಸೋಲಿಸಿದ್ದರು. ಬಳಿಕ ಅನಿರೀಕ್ಷಿತವಾಗಿ ಕರ್ನಾಟಕ ಸಿಎಂ ಆಗಿ ಪದಗ್ರಹಣ ಮಾಡಿದರು. ಇನ್ನು ಇದೇ ಕ್ಷೇತ್ರದಿಂದ ಇವರ ತಂದೆ ಎಸ್.ಆರ್. ಬೊಮ್ಮಾಯಿ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರು ಕ್ಷೇತ್ರ ಅರೆಮಲೆನಾಡು ಮತ್ತು ಬಯಲು ಸೀಮೆಯ ಮಿಶ್ರಣವಾಗಿದೆ. ಈಗಲೂ ತನ್ನ ಹಳ್ಳಿ ಸೊಗಡನ್ನು ಉಳಿಸಿಕೊಂಡಿದೆ. ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ (ಗೊಟಗೋಡಿ) ಇರುವುದು ಶಿಗ್ಗಾಂವಿ ಕ್ಷೇತ್ರದಲ್ಲಿ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಉಳಿದಂತೆ ಕುರುಬ ಮತ್ತು ಎಸ್‌ಸಿ ಮತ್ತು ಎಸ್‌ಟಿ ಮತಗಳು ಅಧಿಕವಾಗಿವೆ. 70,000 ಲಿಂಗಾಯತ ಮತಗಳಿದ್ದರೆ, 55,000ಕ್ಕೂ ಹೆಚ್ಚು ಮುಸ್ಲಿಂ ಮತಗಳಿವೆ. ಇನ್ನು ಎಸ್‌ಸಿ ಮತ್ತು ಎಸ್‌ಟಿ ಮತಗಳು 30,000ಕ್ಕೂ ಹೆಚ್ಚು ಹೆಚ್ಚಿವೆ.
ಕುರುಬರು ಸುಮಾರು 22,000 ಮತಗಳನ್ನು ಹೊಂದಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.21 ಲಕ್ಷ ಮತದಾರರಿದ್ದಾರೆ. ಅದರಲ್ಲಿ 1.11 ಲಕ್ಷ ಪುರುಷರು ಮತ್ತು 1.10 ಲಕ್ಷ ಮಹಿಳೆಯರಿದ್ದಾರೆ.
ಶಿಗ್ಗಾಂವಿ ಕ್ಷೇತ್ರ ದಶಕದ ಹಿಂದೆ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿತ್ತು. ಬಸವರಾಜ ಬೊಮ್ಮಾಯಿ ಈ ಕ್ಷೇತ್ರದಿಂದ ಆಯ್ಕೆಯಾದ ನಂತರ ತಾಲ್ಲೂಕಿನ ಚಿತ್ರಣವನ್ನೇ ಬದಲಿಸಿದ್ದಾರೆ. ಅಪ್ಪರ್ ತುಂಗಾ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಅಡಿಯಲ್ಲಿ ಎಲ್ಲಾ ಕೆರೆಗಳು ತುಂಬಿಸಿದ್ದಾರೆ. ಅಂತರ್ಜಲ ಮಟ್ಟ ಸುಧಾರಿಸುವುದರಿಂದ ಕೃಷಿ ಕ್ಷೇತ್ರ ರೈತರ ಕೈ ಹಿಡಿದಿದೆ.
ಅಲ್ಲದೇ ನಗರ ರಸ್ತೆಗಳು, ಗ್ರಾಮೀಣ ರಸ್ತೆಗಳು, ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿ, ಹಿಂದೂ-ಮುಸ್ಲಿಂ ಬಾಂಧವ್ಯ, ದೇಗುಲ-ಮಸೀದಿ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ ಕ್ಷೇತ್ರದ ಜನರ ಮನ ಗೆದ್ದಿದ್ದಾರೆ.












Click it and Unblock the Notifications