Haveri: ಬಂಕಾಪುರದ ಜನತೆಗೆ ಹೊಸ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿ
ಶಿಗ್ಗಾವಿ, ಏಪ್ರಿಲ್ 19:ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಬಂಕಾಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಬೃಹತ್ ರೋಡ್ ಶೋ ಮೂಲಕ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರಾದ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಸಿಎಂಗೆ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ನನ್ನನ್ನು ಬೆಳಸಿದವರು ಶಿಗ್ಗಾವಿ ಜನರು. ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ. ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯಲ್ಲೇ ಮಣ್ಣು ಮಾಡಬೇಕು. ಈ ಮೂಲಕ ನನ್ನ ಶಿಗ್ಗಾವಿ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತಾಗಲಿ ಎಂದು ಹೇಳಿದರು.
ಶಿಗ್ಗಾವಿ ಕ್ಷೇತ್ರದ ಜನರಿಗೆ ಪ್ರಾಮಾಣಿಕ ಸೇವೆ
ಚುನಾವಣೆ ಸಂದರ್ಭದಲ್ಲಿ ನಾನು ಈ ಕ್ಷೇತ್ರ ಬಿಟ್ಟು ಬೇರೆಡೆ ಹೋಗುತ್ತೇನೆ ಎಂದು ಕೇಳಿದರು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ನನ್ನ ಮಾಲೀಕರು, ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ ಎಂಬ ಸುದ್ದಿ ಹಬ್ಬಿಸಿದ್ದರು. ಯಾವ ನನ್ನ ಮಗ ಹೇಳಿದ್ದು ಎಂದು ಕೇಳಿದೆ. ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ ಎಂದರು.
ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ಪಕ್ಷ ಕರ್ನಾಟಕದಲ್ಲಿ ಅತ್ಯಂತ ಸಂಘಟಿತವಾಗಿದೆ. ಸದರಿ ಚುನಾವಣೆಯಲ್ಲಿ ಬಿಜೆಪಿ 125 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ. ಮತ್ತೊಮ್ಮೆ ಕನ್ನಡ ನಾಡಿನ ಸೇವೆಯನ್ನು ಮಾಡಲು ಬಾರತೀಯ ಜನತಾ ಪಕ್ಷಕ್ಕೆ ಜನಾಶೀರ್ವಾದ ಸಿಗಲಿದೆ. ನಮ್ಮ ಸರ್ಕಾರದ ಕಾರ್ಯ ಯೋಜನೆಗಳು, ನನ್ನ ಕೆಲಸ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಶಿಗ್ಗಾವಿ ಕ್ಷೇತ್ರದಲ್ಲಿ ಹಾಗೂ ಸವಣೂರು, ಬಂಕಾಪುರದಲ್ಲಿ 6 ಸಾವಿರ ಮನೆ ನಿರ್ಮಾಣ ಮಾಡಿದ್ದೇವೆ. ನಗರಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇವೆ. ಪ್ರತಿಯೊಂದು ಗ್ರಾಮಕ್ಕೆ ಇನ್ನು ಆರು ತಿಂಗಳಲ್ಲಿ ಪ್ರತಿಯೊಂದು ಮನೆಗೆ ನಳದಿಂದ ನೀರು ಕೊಡುವಂತಹ ವ್ಯವಸ್ಥೆ ನಮ್ಮ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಆಗುತ್ತಿದೆ. ನಮ್ಮ ಪ್ರಧಾನಿ ಮೋದಿ, ನಡ್ಡಾ ಅವರ ನೇತೃತ್ವದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ನಲ್ಲಿ ನೀರು ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಶಿಗ್ಗಾವಿಗೆ ಮೂಲಸೌಕರ್ಯಗಳೇ ಇರಲಿಲ್ಲ
ಶಿಗ್ಗಾವಿ-ಸವಣೂರಿನ ಅಭಿವೃದ್ಧಿ ಕನಸಾಗಿತ್ತು. 2008ರಲ್ಲಿ ಒಳ್ಳೆಯ ರಸ್ತೆ ಇರಲಿಲ್ಲ, ರಸ್ತೆಯ ಮಧ್ಯೆ ಹಳ್ಳಗಳಿದ್ದವು. ಕುಡಿಯಲು ನೀರಿರಲಿಲ್ಲ. ಕುಡಿಯುವ ನೀರಿಗಾಗಿ ನಮ್ಮ ತಾಯಂದಿರು ರಸ್ತೆಯಲ್ಲಿ ಕೊಡ ಹಿಡಿದುಕೊಂಡು ಸಾಲು ಹಿಡಿದು ನಿಲ್ಲುತ್ತಿದ್ದರು. ಒಂದು ಒಳ್ಳೆಯ ಕಚೇರಿಯ ಕಟ್ಟಡ ಇರಲಿಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಇರಲಿಲ್ಲ. ಕೆರೆಗಳಿಗೆ ನೀರು ಇರಲಿಲ್ಲ. ಇದರ ಮಧ್ಯೆ ಪ್ರಾರಂಭವಾಗಿರುವ ನಮ್ಮ ಅಭಿವೃದ್ಧಿ ಪಯಣ ಇವತ್ತು ಎರಡು ಏತ ನೀರಾವರಿ ಮಾಡಿ 100ಕ್ಕಿಂತ ಹೆಚ್ಚು ಕೆರೆಗಳನ್ನು ತುಂಬಿಸಿರುವ ದಾಖಲೆ ಶಿಗ್ಗಾವಿ-ಸವಣೂರಲ್ಲಿ ಆಗಿದೆ ಎಂದು ತಮ್ಮ ಸಾಧನೆ ತಿಳಿಸಿದರು.
ಕೆಲವೇ ವರ್ಷಗಳಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಆರ್ಯುವೇದಿಕ ಆಸ್ಪತ್ರೆ, ಶಿಗ್ಗಾವಿ, ಸವಣೂರಿನಲ್ಲಿ 250 ಹಾಸಿಗೆಯ ಆಸ್ಪತ್ರೆ, ಜಿಟಿಟಿಸಿ ಮತ್ತು ಇಂಜಿನಿಯರಿಂಗ್ ಕಾಲೇಜು, 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲಾಗಿದೆ.
ಬಂಕಾಪುರ ತಾಲ್ಲೂಕು ಆಗಬೇಕೆಂದು ಜನರ ಬೇಡಿಕೆ ಇದೆ. ನಾನು ಇವತ್ತು ಅದಕ್ಕೆ ಎಲ್ಲ ಅನುಮತಿ ಕೊಟ್ಟು ಆಜ್ಞೆ ಮಾಡಿದ್ದೇನೆ. ಚುನಾವಣೆ ನೀತಿ ಸಂಹಿತೆ ಅದಕ್ಕೆ ಅಡಚಣೆಯಾಗಿದೆ. ಬರುವ ದಿನಗಳಲ್ಲಿ ಬಂಕಾಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಅವರು ಪುನರುಚ್ಚರಿಸಿದರು.












Click it and Unblock the Notifications