ಶಿಗ್ಗಾವಿ ಉಪಚುನಾವಣೆ: ಶೇ.10.8ರಷ್ಟು ಮತದಾನ, ಅಪ್ಪ-ಮಗನಿಂದ ಮತ ಚಲಾವಣೆ
ಹಾವೇರಿ, ನವೆಂಬರ್ 13: ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯ ಕಣವಾಗಿರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣೆ ನಡೆಯುತ್ತಿದೆ. ಎಲ್ಲ ವಯೋಮಾನದವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಬೆಳಗ್ಗೆ 9 ಗಂಟೆವರೆಗೆ ಬರೋಬ್ಬರಿ ಶೇಕಡಾ 10.8ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಯಿತು. ಆರಂಭದಲ್ಲಿಯೇ ವ್ಹೀಲ್ ಚೇರಿನಲ್ಲಿ ವೃದ್ಧರು ಸಮೀಪದ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದಾರೆ. ಎಲ್ಲ ವಿಧದ ವಯೋಮಾನದವರು ಕ್ಷೇತ್ರದಲ್ಲಿ ಮತಗಟ್ಟೆಗಳಿಗೆ ಬಂದು, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರ ಪರಿಣಾಮವಾಗಿ ಕೇವಲ ಎರಡು ಗಂಟೆಗಳಲ್ಲಿ ಶೇಕಡಾ 10.8ರಷ್ಟು ಮತದಾನ ನಡೆಯಿತು.

ಎಲ್ಲ ಮತಗಟ್ಟೆಗಳ ಭಾಗದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಲಿಂಗಾಯತರು ಹಾಗೂ ನಂತರದ ಸ್ಥಾನದಲ್ಲಿ ಮುಸ್ಲಿಮರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಗೆಲುವು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಪ್ರಚಾರ ಕಾರ್ಯದಲ್ಲಿದ್ದಾಗ ಕೇಳಿ ಬಂದ ಆರೋಪ, ಪ್ರತ್ಯಾರೋಪಗಳು ನೋಡಿದರೆ, ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್, ಅಭಿವೃದ್ಧಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಎಂಬಂತಾಗಿತ್ತು.
ಇಲ್ಲಿ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಪುತ್ರ ಭರತ್ ಬೊಮ್ಮಾಯಿ ಅವರು ಬಿಜೆಪಿಯಿಂದ ಹಾಗೂ ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಅವರು ಸ್ಫರ್ಧಿಸಿದ್ದಾರೆ.
ಮತದಾನಕ್ಕೂ ಮೊದಲು ಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಪುತ್ರ ಭರತ್ ಬೊಮ್ಮಾಯಿ ದೇವರಲ್ಲಿ ಪ್ರಾರ್ಥಿಸಿದರು. ವಿಶೇಷ ಪೂಜೆ ನೆರವೇರಿಸಿ, ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಎಲ್ಲರು ಮತದಾನ ಹಕ್ಕು ಚಲಾಯಿಸಿ
ಮತದಾನ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಲ್ಲರು ಮತದಾನ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಬಾರಿಯು ಉಪಚುನಾವಣೆಯಲ್ಲಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಭಾರಿ ಬಹುಮತಗಳಿಂದ ಗೆಲ್ಲುವ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.
ಇತ್ತ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟ ಅವರು, ವಿಧಾನಸೌಧದ ಬಾಗಿಲು ಹಾಕಿಕೊಂಡು ಇಲ್ಲಿಗೆ ಚೀಲದಲ್ಲಿ ಹಣತಂದು ರಾಜಕೀಯ ಮಾಡಿದವರಿಗೆ ಕ್ಷೇತ್ರ ಮತದಾರರು ಬುದ್ಧಿಕಲಿಸುತ್ತಾರೆ ಎಂದು ನಾನು ನಂಬಿದ್ದೇನೆ. ಜನರು ಅಭಿವೃದ್ಧಿಪರವಾಗಿದ್ದಾರೆ ಎಂದು ಅವರು ಆಡಳಿತ ಪಕ್ಷ ಕಾಂಗ್ರೆಸ್‌ಗೆ ತಿವಿದರು.












Click it and Unblock the Notifications