ಸಿಎಂ ಸಿದ್ದರಾಮಯ್ಯ ಅನುಭವಕ್ಕೂ, ಕಾಂಗ್ರೆಸ್ ಸರ್ಕಾರದ ಆಡಳಿತ ಮಧ್ಯೆ ವ್ಯತ್ಯಾಸವಿದೆ: ಮಾಜಿ ಸಿಎಂ
ಹಾವೇರಿ, ಏಪ್ರಿಲ್ 06: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನ ಆಡಳಿತಕ್ಕೂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಭವಕ್ಕೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್ ನಾಯಕರು ಕುರ್ಚಿ ಭದ್ರಪಡಿಸಿಕೊಳ್ಳಲು ಓಡಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತರೊಡನೆ ಬಹಿರಂಗ ಪ್ರಚಾರ ಸಭೆ ನಡೆಸಿ ಮತದಾರರಲ್ಲಿ ಮತಯಾಚನೆ ಮಾಡಿದರು.

ಕರ್ನಾಟಕದಲ್ಲಿ ಕಳೆದ ಹತ್ತು ತಿಂಗಳಿನಲ್ಲಿ ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಂದು ಸರ್ಕಾರವಿದೆ ಅಷ್ಟೇ. ಆದರೆ ಸಿದ್ದರಾಮಣ್ಣನ ಆಡಳಿತದ ಈ ಸರ್ಕಾರಕ್ಕೂ ಸಿದ್ದರಾಮಯ್ಯಗಿರುವ ಅನುಭವವೇ ಬೇರೆಯಾಗಿದೆ ಎಂದರು.
ಗ್ರಾಮೀಣಮಟ್ಟದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ
ಈ ಸಿದ್ದರಾಮಣ್ಣನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಿಯೂ ಒಂದು ಸಣ್ಣ ಕೆಲಸವೂ ಕೂಡ ಆಗಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಜನರ ಕೆಲಸಗಳನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಅವರು ಆರೋಪಿಸಿದರು.

ಇನ್ನು ಗ್ಯಾರಂಟಿ ಯೋಜನೆಗಳಿಗೆ ಈ ಕಾಂಗ್ರೆಸ್ ಸರ್ಕಾರ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡಲೇ ಇಲ್ಲ. ಸರಿಯಾದ ವ್ಯವಸ್ಥೆ ಮಾಡದೆಯೇ ಕಾಂಗ್ರೆಸ್‌ನವರು ಗ್ಯಾರೆಂಟಿಗಳನ್ನು ಕೊಡುತ್ತೇವೆ ಎಂದರು. ಆದರೆ, ಇದ್ದ ಹಣಕಾಸಿಗೆ ಕೈ ಹಾಕಿ ಗ್ಯಾರಂಟಿ ಕೊಡುತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಒಂದೂ ನಯಾ ಪೈಸೆಯೂ ಉಳಿದಿಲ್ಲ. ಇವರ ಖಜಾನೆಯ ಬೊಕ್ಕಸ ಬರಿದಾಗಿದೆ ಎಂದು ವಿವರಿಸಿದರು.
ಎಸ್‌ಸಿ, ಎಸ್‌ಟಿ ಹಣ ಗ್ಯಾರೆಂಟಿಗೆ ಬಳಕೆ
ಪರಿಶಿಷ್ಟ ಜಾತಿ, ಸಮುದಾಯಗಳಿಗೆ ಮೀಸಲಿಟ್ಟಿದ್ದ 11,300 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ. ಎಸ್ ಸಿ, ಎಸ್ ಟಿ ಜನಾಂಗಗಳಿಗೆ ಸಾಲಸೌಲಭ್ಯ ಸಿಗುತ್ತಿಲ್ಲ. ಗಂಗಾ ಕಲ್ಯಾಣ ಬೋರ್ ಸಿಗುತ್ತಿಲ್ಲ. ಇನ್ನು ರೈತರ ಬಗ್ಗೆಯಂತೂ ಈ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಾಳಜಿಯೂ ಇಲ್ಲ.
10 ತಿಂಗಳಾದರೂ ರೈತರು ಒಂದು ಕಾಳನ್ನು ಕೂಡ ಬೆಳೆದಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ತಾವು ಸಿಎಂ ಆಗಿದ್ದಾಗ, ಒಂದೇ ತಿಂಗಳಿನಲ್ಲಿ ರೈತರಿಗೆ ಬೆಳೆ ಪರಿಹಾರ ಕೊಟ್ಟಿದ್ದೆವು. 17 ಲಕ್ಷ ರೈತರಿಗೆ ಪರಿಹಾರ ಕೊಟ್ಟೆವು. ಆದರೆ, ರೈತರ ಕೆಲಸ ಮಾಡಲು ಈ ಕಾಂಗ್ರೆಸ್ ಸರ್ಕಾರಕ್ಕೆ ಮನಸಿಲ್ಲ.
ವೈಫಲ್ಯ ಮುಚ್ಚಿಕೊಳ್ಳಲು ಯತ್ನ
ಕಾಂಗ್ರೆಸ್‌ನವರಿಗೆ ಮನಸಿಲ್ಲದೆಯೇ ಸುಮ್ಮನೆ ಕೇಂದ್ರದ ಮೇಲೆ ಬೆರಳು ಮಾಡಿ ತೋರಿಸುತ್ತಿದ್ದಾರೆ ಅಷ್ಟೇ. ರೈತರನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ, ಇವರೆಲ್ಲ ತಮ್ಮ ಹಾಗೂ ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಬರೀ ಭಾಷಣ ಮಾಡುತ್ತಿದ್ದಾರೆ.
ಎಲ್ಲಾ ಜನಗಿರೂ ಸರಿಯಾದ ಗ್ಯಾರೆಂಟಿ ಮುಟ್ಟಿಲ್ಲ. ಗೃಹಲಕ್ಷ್ಮೀ ಯೋಜನೆಯ ಹಣ ಪ್ರಗತಿಯಲ್ಲಿದೆ ಎಂದು ಬರುತ್ತಲೇ ಇದೆ. ರಾಜ್ಯಕ್ಕೆ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಿಂದ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಕುರ್ಚಿ ಭದ್ರ ಮಾಡಿಕೊಳ್ಳಲು ಓಡಾಟ
ಈ ಸರ್ಕಾರದಲ್ಲಿ ಜನರ ಕೆಲಸ ಮಾಡಲು ಸಮಯವೇ ಇಲ್ಲ. ಆದರೆ, ಇವರು ಜನರಿಗೆ ಕೆಲಸ ಮಾಡುವುದಕ್ಕಿಂತ ತಮ್ಮ ತಮ್ಮ ಖುರ್ಚಿಯನ್ನು ಮಾತ್ರ ಭದ್ರಗೊಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವು ಮಂತ್ರಿಗಳಿಗೆ ಲೋಕಸಭಾ ಚುನಾವಣೆ ನಿಲ್ಲಿ ಎಂದು ಹೇಳಿದ್ದಾರೆ.
ಏಕೆಂದರೆ, ಇವು 5 ಗ್ಯಾರೆಂಟಿಗಳ ಜೊತೆ ಅಭ್ಯರ್ಥಿಗಳನ್ನು ಸೋಲಿಸುವ ಗ್ಯಾರೆಂಟಿಯೂ ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಮತ್ತೆ ಮೋದಿ ಪ್ರಧಾನಿಗಳಾಗಿ ಸರ್ಕಾರ ಬಂದ ತಕ್ಷಣ ಈ ಸರ್ಕಾರದ ದಿನಗಣನೆ ಪ್ರಾರಂಭವಾಗಲಿದೆ. ಇನ್ನು 6 ತಿಂಗಳು ಅಥವಾ 1 ವರ್ಷದೊಳಗೆ ಈ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಂದೇ ಬರುತ್ತದೆ ಎಂದು ಹೇಳಿದರು.
ಈ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರೆಂಟಿ, ಜೀರೋ ಅಭಿವೃದ್ಧಿ ಗ್ಯಾರೆಂಟಿ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗೆ ಸೋಲು ಕೂಡ ಗ್ಯಾರೆಂಟಿ ಎಂದು ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.












Click it and Unblock the Notifications