Hirekerur Constituency: ಬಿಜೆಪಿ 'ಕೌರವ' ಭದ್ರಕೋಟೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ತಂತ್ರ ಹೇಗಿದೆ?
ಹಿರೇಕೆರೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿಯೂ ಬಿ.ಸಿ. ಪಟೀಲ್ ಗೆಲುವು ಸಾಧಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗಾದರೆ ಈ ಕ್ಷೇತ್ರದಲ್ಲಿ "ಕೌರವ"ಗೆ ಪ್ರಬಲ ಎದುರಾಳಿ ಯಾರು ಎನ್ನುವ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜಕಾರಣಿಗಳು ಮತದಾರರನ್ನು ಒಲೈಸುವತ್ತ ಮುಂದಾಗಿದ್ದಾರೆ. ಹೀಗೆ ಮತದಾರರನ್ನು ಸೆಳೆಯಲು ಇನ್ನಿಲ್ಲದ ಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ತಮ್ಮ ಕ್ಷೇತ್ರಗಳನ್ನು ಬಿಟ್ಟು ಕದಲದೇ ಪ್ರಚಾರವನ್ನು ಕೂಡ ಭರ್ಜರಿಯಾಗಿ ಮಾಡುತ್ತಿದ್ದಾರೆ. ಹಾಗೆಯೇ ಆಮಿಷಗಳ ಮೂಲಕ ಜನರ ಮನವೊಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಹಾಗಾದರೆ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಪೈಪೋಟಿಗಳು ಹೇಗೆ ನಡೆಯುತ್ತಿವೆ. ಮೂರು ಪಕ್ಷಗಳಿಂದ ಯಾರೆಲ್ಲ ಪ್ರಬಲ ಅಭ್ಯರ್ಥಿಗಳು ಇದ್ದಾರೆ. ಮತದಾರರ ಒಲವು ಯಾರ ಕಡೆ ಇದೆ. ಯಾವ ಸಮುದಾಯದ ಮತಗಳು ಹೆಚ್ಚಿವೆ ಅನ್ನುವ ಸಂಪೂರ್ಣ ವಿವರವನ್ನು ತಿಳಿಯೋಣ ಬನ್ನಿ.

ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಈ ಬಾರಿಯೂ ಕೂಡ ತೀವ್ರ ಕುತೂಹಲ ಕೆರಳಿಸುತ್ತಿದೆ. ಇದು ಕನ್ನಡ ಚಿತ್ರ ನಟ, ನಿರ್ಮಾಪಕ, ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಈ ಕಾರಣಕ್ಕಾಗಿಯೇ ಹಿರೇಕೆರೂರು ಕ್ಷೇತ್ರ ಈ ಬಾರಿಯೂ ತೀವ್ರ ಕುತೂಹಲ ಮೂಡಿಸಿದೆ. ಬಿ.ಸಿ. ಪಾಟೀಲ್ 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಆಗ ಗೆಲುವು ಸಾಧಿಸಿದ್ದರು. ನಂತರ ಅವರು ಬಿಜೆಪಿಗೆ ಸೇರ್ಪಡೆಯಾದರು. ಹೀಗಾಗಿ 2019ರಲ್ಲಿ ಮತ್ತೊಮ್ಮೆ ಉಪಚುನಾವಣೆಯೂ ಆಯಿತು.
ಬಿ.ಸಿ.ಪಾಟೀಲ್ ರಾಜಕೀಯದ ಹಾದಿ
2019ರ ಉಪಚುನಾವಣೆಯ ನಂತರ ಈ ಕ್ಷೇತ್ರ ಕಾಂಗ್ರೆಸ್ ಕೈಬಿಟ್ಟು ಹೋಗಿ, ಬಿಜೆಪಿ ವಶಕ್ಕೆ ಬಂದಿತ್ತು. ಇದೀಗ ಮತ್ತೊಮ್ಮೆ ಇದೇ ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ಈ ಬಾರಿಯೂ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಲಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರ
ಹಿರೇಕೆರೂರು ಹಾವೇರಿ ಜಿಲ್ಲೆಯ ಕೊನೆಯ ತಾಲೂಕು ಆಗಿದೆ. ರಟ್ಟೆಹಳ್ಳಿ ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಒಳಗೊಂಡ ಹಿರೇಕೆರೂರು ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ಆದರೆ ಬಿ.ಸಿ. ಪಾಟೀಲ್ ಪಕ್ಷಾಂತರ ಆದಾಗಿನಿಂದ ಬಿಜೆಪಿ ಕೋಟೆಯಾಗಿ ಪರಿವರ್ತನೆಯಾಗಿದೆ. ಇದೀಗ ಇಲ್ಲಿ ಮತ್ತೆ ಕೌರವನದ್ದೇ ದರ್ಬಾರ್ ಎನ್ನುವ ಮಾತುಗಳು ಕೂಡ ಜೋರಾಗಿಯೇ ಕೇಳಿಬರುತ್ತಿವೆ.
ಹಿರೇಕೆರೂರು ಕ್ಷೇತ್ರದಲ್ಲಿ ಮುಂದುವರಿದ ಪೈಪೋಟಿ
ಹಿರೇಕೆರೂರು ಕ್ಷೇತ್ರ ಕೃಷಿ ಸಚಿವ ಬಿ.ಸಿ.ಪಾಟೀಲ್‌ರ ತವರೂರು ಆಗಿದೆ. ಪೊಲೀಸ್ ಅಧಿಕಾರಿಯಾಗಿದ್ದ ಬಿ. ಸಿ. ಪಾಟೀಲ್ ಇದೀಗ ಕೃಷಿ ಸಚಿವರಾಗಿದ್ದಾರೆ. ಬಿ. ಸಿ. ಪಾಟೀಲ್ ಪೂರ್ಣ ಹೆಸರು ಬಸನಗೌಡ ಚನ್ನಬಸನಗೌಡ ಪಾಟೀಲ್. ನಾಲ್ಕು ಬಾರಿ ಶಾಸಕರಾಗಿರುವ ಬಿ.ಸಿ. ಪಾಟೀಲ್, ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲೂ ಸಚಿವರಾಗಿ ಮುಂದುವರೆದಿದ್ದಾರೆ.

ಪೊಲೀಸ್ ಆಗಿ ಕಾರ್ಯ ನಿರ್ವಹಿಸಿದ್ದ ಕೌರವ
1979ರಲ್ಲಿ ಸಬ್ ಇನ್ಸ್‌ಸ್ಪೆಕ್ಟರ್ ಆಗಿ ನೇಮಕ ಆಗಿದ್ದರು. ಬಳ್ಳಾರಿ, ಹಿರಿಯೂರು ಮತ್ತು ದಾವಣಗೆರೆಯಲ್ಲಿಯೂ ಸಹ ಕಾರ್ಯ ನಿರ್ವಹಿಸಿದ್ದರು. ನಂತರ ಇನ್ಸ್‌ಸ್ಟೆಕ್ಟರ್ ಆಗಿ ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆ ಆದರು. ನಂತರ 2003ರಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ, ರೈತ ಹೋರಾಟದಲ್ಲಿ ಭಾಗಿಯಾದರು. ಈ ವೇಳೆ ಜೈಲು ವಾಸವನ್ನೂ ಕೂಡ ಅನುಭವಿಸಿದರು. ಬಳಿಕ ರಾಜಕೀಯಕ್ಕೆ ಬಂದು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದರು. 2008, 2018ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಆಯ್ಕೆಯಾಗಿ ಗಮನ ಸೆಳೆದರು.
2018ರಲ್ಲಿ ಬಿಜೆಪಿಯ ಯು.ಬಿ. ಬಣಕಾರ್ ಹಾಗೂ ಕಾಂಗ್ರೆಸ್‌ನಲ್ಲಿದ್ದ ಬಿ.ಸಿ.ಪಾಟೀಲ್ ಮಧ್ಯೆ ಪೈಪೋಟಿಯೇ ನಡೆದಿತ್ತು. ಈ ವೇಳೆ ಕೇವಲ 555 ಮತಗಳಿಂದ ಬಿ.ಸಿ. ಪಾಟೀಲ್ ಗೆದ್ದಿದ್ದರು. ಬಳಿಕ ಬಿಜೆಪಿಗೆ ಸೇರಿ, 2019ರಲ್ಲಿ ಉಪಚುನಾವಣೆಯಲ್ಲಿ ಗೆದ್ದು, ಕೃಷಿ ಸಚಿವರಾದರು. ಹೀಗೆ ಬಿ.ಸಿ. ಪಾಟೀಲ್ ಬಿಜೆಪಿಗೆ ಸೆರ್ಪಡೆಯಾದ ನಂತರವೂ ಮತ್ತೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪಣತೊಟ್ಟು ನಿಂತಿದ್ದಾರೆ.

ಬಿ.ಸಿ. ಪಾಟೀಲ್‌ಗೆ ಎದುರಾಳಿ ಯಾರು?
ಇನ್ನು ಮಾಜಿ ಶಾಸಕ ಯು.ಬಿ. ಬಣಕಾರ್ ಈ ಬಾರಿ ಕೌರವ ಬಿ.ಸಿ. ಪಾಟೀಲ್‌ಗೆ ಬಿಗ್ ಫೈಟ್ ಕೊಡಲು ಸಜ್ಜಾಗಿ ನಿಂತಿದ್ದಾರೆ. ಕೇವಲ 555 ಮತಗಳಿಂದ ಸೋತಿದ್ದ ಬಣಕಾರ್ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ನಿಂದ ಬಣಕಾರ್ ಸ್ಪರ್ಧಿಸುವುದಕ್ಕೆ ಮುಂದಾಗಿದ್ದಾರೆ. ಅತ್ತ ಮತ್ತೋರ್ವ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ತನಗೆ ಟಿಕೆಟ್ ತಪ್ಪಿದರೆ, ಮಗ ಪ್ರಕಾಶ್ ಬನ್ನಿಕೋಡ್‌ಗೆ ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರೆ. ಇದೆಲ್ಲದರ ನಡುವೆ ಕೌರವನ ಆಟ ಹೇಗೆ ಮುಂದುವರೆಯಲಿದೆ ಎಂದು ಕಾದುನೋಡಬೇಕಿದೆ ಅಷ್ಟೇ.
ಜಾತಿವಾರು ಮತದಾರರ ವಿವರ (ಅಂದಾಜು)
ಮತದಾರುರು- 1,82,796
ಲಿಂಗಾಯತರು- 65,000
ಮುಸ್ಲಿಂಮರು 33,000
ಕುರುಬರು 32,000 ಸಾವಿರ
ಎಸ್‌ಸಿ ಸಮುದಾಯದವರು 22,000
ಇತರೇ ಸಮುದಾಯದವರು 32,000
ಹೀಗೆ ಹಿರೇಕೆರೂರು ಕ್ಷೇತ್ರದಲ್ಲಿ ಯಾವ ಸಮುದಾಯದವರು ಎಷ್ಟು ಮತದಾರರಿದ್ದಾರೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. ಹಾಗೆಯೇ ಕ್ಷೇತ್ರದಲ್ಲಿ ಈ ಬಾರಿಯೂ ಕೂಡ ಕೌರವನ ಆಟ ಜೋರಾಗಿ ನಡೆಯುತ್ತಿದ್ದು, ಪೈಪೋಟಿಗಳ ನಡುವೆಯೂ ಮತ್ತೆ ಗೆಲುವು ಸಾಧಿಸುತ್ತಾರಾ ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಮತದಾರರು ಈ ಬಾರಿ ಯಾರ ಕಡೆಗೆ ಒಲವು ತೋರುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications