Haveri: ಜಿಲ್ಲೆಯಲ್ಲಿ ಬೆಂಕಿ ಅವಘಡ ಹೆಚ್ಚಳ: ಅಗ್ನಿ ಶಾಮಕ ವಾಹನಗಳ ಕೊರತೆ, ಬೆಂಕಿ ನಂದಿಸುವುದೇ ಸವಾಲು
ಹಾವೇರಿ, ಮಾರ್ಚ್ 03: ರಾಜ್ಯದ ಮಧ್ಯ ಭಾಗದ ಜಿಲ್ಲೆಯಾದ ಯಾಲಕ್ಕಿ ಕಂಪನಿ ಹಾವೇರಿ ಜಿಲ್ಲೆಯು ಬೇಸಿಗೆಯಲ್ಲಿ ಪ್ರಮುಖ ಸಮಸ್ಯೆಯೊಂದನ್ನು ಎದುರಿಸುತ್ತಿದೆ. ಕೃಷಿ ಆಧಾರಿತ ಕುಟುಂಬಗಳು ಈ ಭಾಗದಲ್ಲಿ ಹೆಚ್ಚಿವೆ. ಬೇಸಿಗೆ ವೇಳೆ ಜಿಲ್ಲೆ ವ್ಯಾಪ್ತಿಯಲ್ಲಿ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಇಂತದ ಸಂದರ್ಭದಲ್ಲಿ ಸಕಾಲಕ್ಕೆ ತೆರಳಿ ಬೆಂಕಿ ನಂದಿಸುವುದೇ ಸವಾಲಾಗಿದೆ. ಏಕೆಂದರೆ ಇಲ್ಲಿ ಮೂಲಸೌಕರ್ಯ ಕೊರತೆ ತಾಂಡವವಾಡುತ್ತಿದೆ.
ಅಖಂಡ ಧಾರವಾಡದಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ ದಶಕಗಳು ಕಳೆದರೂ ಇನ್ನೂ ಅಭಿವೃದ್ಧಿ ಎದುರು ನೋಡುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಜಲವಾಹನ, ಅಗ್ನಿ ಶಾಮಕ ಸಿಬ್ಬಂದಿ ಕೊರತೆ ಇದೆ. ಹಾವೇರಿ ಜಿಲ್ಲೆಗೆ ಒಂದು, ಎಂಟು ತಾಲೂಕುಗಳಿಗೆ ಏಳು ಜಲ ವಾಹನಗಳನ್ನು ಮಾತ್ರವೇ ನೀಡಲಾಗಿದೆ. ಹೊಸದಾಗಿ ತಾಲೂಕು ಆದ ರಟ್ಟಿಹಳ್ಳಿಗೆ ಒಂದೂ ಅಗ್ನಿ ಆರಿಸುವ ಜಲ ವಾಹನ ಇಲ್ಲ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಈ ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ ಜಲ ವಾಹನಗಳ ಕೊರತೆ ಮಾತ್ರವಲ್ಲ, ರಕ್ಷಣಾ ಸಿಬ್ಬಂದಿ ಕೊರತೆ, ಠಾಣೆಗಳ ಕೊರತೆಯೂ ಇದೆ. ಹಾವೇರಿ ತಾಲೂಕು ಹೌದು. ಜಿಲ್ಲೆಯ ಒಟ್ಟು ಎಂಟು ತಾಲೂಕುಗಳಲ್ಲಿ ಅಗ್ನಿ ಅವಘಡ ನಡೆದರೆ, ಆಯಾ ವ್ಯಾಪ್ತಿಯಲ್ಲಿ ಒಂದೇ ಜಲವಾಹನವೇ ಹೋಗಿ ಬೆಂಕಿ ನಂದಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಹೀಗಿದ್ದರೂ ಸರ್ಕಾರ ಜಲ ವಾಹನಗಳ ಕೊರತೆ ನೀಗಿಸುವ ಮನಸ್ಸು ಮಾಡಿಲ್ಲ.
2025ರಲ್ಲಿ ಈವರೆಗೆ ಅಂದರೆ ಎರಡೇ ತಿಂಗಳಲ್ಲಿ 290ಕ್ಕೂ ಹೆಚ್ಚು ಅಗ್ನಿ ಅವಘಡ ಸಂಭವಿಸಿವೆ. ಇಷ್ಟು ಅವಘಡಗಳಿಗೆ ಹಾಲಿ ವಾಹನಗಳು ಬೆಂಕಿ ನಂದಿಸುವ ಸವಾಲು ಎದುರಿಸುತ್ತಿವೆ. ಒಂದು ಕಡೆ ಬೆಂಕಿ ನಂದಿಸಲು ಹೋದಾಗ, ಅದೇ ಸಮಯದಲ್ಲಿ ಬೇರೆಡೆ ಅವಘಡ ಆದಾಗ ಸಮಸ್ಯೆ ಆಗುತ್ತಿದೆ. ರೈತರು ಮೇವು, ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಹತ್ತಾರು ಎಕರೆ ಬೆಳೆ, ಪೈರು ನಾಶವಾಗುತ್ತಿದೆ. ಇದಕ್ಕೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಳೆದ ಬಾರಿ ಹಾವೇರಿ ಜಿಲ್ಲೆಯವರಾದ ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗಲೂ ಸಿಎಂ ಸ್ವಕ್ಷೇತ್ರ ಶಿಗ್ಗಾವಿ ಒಂದಷ್ಟು ಯೋಜನೆಗಳು ಬಂದವು ಬಿಟ್ಟರೆ, ಹಾವೇರಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಗಳೇನು ಆಗಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಸಚಿವರು, ಶಾಸಕರಿದ್ದಾರೆ. ಜಿಲ್ಲೆಯ ರೈತರು, ಅಗ್ನಿ ಶಾಮಕ ದಳದ ಈ ಸಮಸ್ಯೆ ಬಗೆಹರಿಸಬೇಕಿದೆ.












Click it and Unblock the Notifications