ಉಪ ಚುನಾವಣೆ; ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಸುಲಭದ ಗೆಲುವು!
ಹಾವೇರಿ, ಸೆಪ್ಟೆಂಬರ್ 25 : 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಹೆಚ್ಚಿನ ಶ್ರಮವನ್ನು ಹಾಕದೇ ಒಂದು ಕ್ಷೇತ್ರದಲ್ಲಿ ಜಯಗಳಿಸಬಹುದು. ಕಾಂಗ್ರೆಸ್ ಜಿಲ್ಲೆಯಲ್ಲಿ ಗೆದ್ದ ಏಕೈಕ ಕ್ಷೇತ್ರ ಬಿಜೆಪಿಗೆ ವಶವಾಗುವುದು ಬಹುತೇಕ ಖಚಿತವಾಗಿದೆ.
ಲಿಂಗಾಯತ ಸಮುದಾಯದ ಪ್ರಭಾವ ಹೊಂದಿರುವ ಹಾವೇರಿ ಜಿಲ್ಲೆಯ ಹಿರೇರೆಕೂರು ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಕ್ಷೇತ್ರವಿದಾಗಿದೆ.
ಕ್ಷೇತ್ರದ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಅಥವ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ಯು. ಬಿ. ಬಣಕಾರ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಮಡಿಲಿಗೆ ಕ್ಷೇತ್ರ ಬರಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಭಾವ ಜಿಲ್ಲೆಯಲ್ಲಿ ಸಾಕಷ್ಟಿದೆ.
ಬಿ. ಸಿ. ಪಾಟೀಲ್ ಗುರುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕರ್ತರು, ಅಭಿಮಾನಿಗಳ ಸಭೆ ಕರೆದಿದ್ದಾರೆ. ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಕರೆದಿರುವ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಬಿ. ಸಿ. ಪಾಟೀಲ್‌ಗೆ ಟಿಕೆಟ್ ನೀಡಬಾರದು ಎಂಬ ಒತ್ತಾಯವೂ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಬಿಜೆಪಿಗೆ ಸುಲಭದ ತುತ್ತು ಹಿರೇಕೆರೂರು
ಅಕ್ಟೋಬರ್ 21ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಬಿ. ಸಿ. ಪಾಟೀಲ್ ಅಥವ ಯು. ಬಿ. ಬಣಕಾರ ಯಾರಿಗೆ ಟಿಕೆಟ್ ನೀಡಿದರೂ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದಾಗಿದೆ. ಈ ಇಬ್ಬರು ನಾಯಕರ ಎದುರಾಳಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬದು ಕಾಂಗ್ರೆಸ್‌ಗೆ ತಲೆ ನೋವಾಗಿದೆ.

ಯು. ಬಿ. ಬಣಕಾರ
ಯು. ಬಿ. ಬಣಕಾರ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರು. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜೊತೆ ನಿಂತು ಹಿರೇಕೆರೂರು ಕ್ಷೇತ್ರದಲ್ಲಿ ಜಯಗಳಿಸಿದವರು. ಬಿ. ಸಿ. ಪಾಟೀಲ್ ಕಣಕ್ಕಿಳಿಯಲು ನ್ಯಾಯಾಲಯದಲ್ಲಿ ಒಪ್ಪಿಗೆ ಸಿಗದಿದ್ದರೆ ಯು. ಬಿ. ಬಣಕಾರ ಅವರೇ ಅಭ್ಯರ್ಥಿ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?
ಅನರ್ಹ ಶಾಸಕ ಬಿ. ಸಿ. ಪಾಟೀಲ್‌ಗೆ ಟಿಕೆಟ್ ನೀಡಬಾರದು ಎಂಬುದು ಯು. ಬಿ. ಬಣಕಾರ ಮತ್ತು ಸ್ಥಳೀಯ ಬಿಜೆಪಿ ನಾಯಕರ ಒತ್ತಾಯ. ಬಿ. ಸಿ. ಪಾಟೀಲ್ ಅಭ್ಯರ್ಥಿಯಾದರೆ ಯು. ಬಿ. ಬಣಕಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿ ಯು. ಬಿ. ಬಣಕಾರ ಅವರು ಇದ್ದು, ಸುಪ್ರೀಂ ತೀರ್ಪಿಗಾಗಿ ಬಿಜೆಪಿ ಕಾಯುತ್ತಿದೆ.

ವ್ಯಕ್ತಿ ಮತ್ತು ಜಾತಿ ರಾಜಕೀಯ
ಕ್ಷೇತ್ರದ ರಾಜಕೀಯ ಇತಿಹಾಸ ನೋಡಿದರೆ ವ್ಯಕ್ತಿ ಮತ್ತು ಜಾತಿ ರಾಜಕೀಯವೇ ಮುಖ್ಯವಾಗಿದೆ. ಯು. ಬಿ. ಬಣಕಾರ ಮತ್ತು ಬಿ. ಸಿ. ಪಾಟೀಲ್ ಇಬ್ಬರೂ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದ್ದರಿಂದ, ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿಗೆ ಲಾಭ.

2018ರ ಚುನಾವಣೆ ಫಲಿತಾಂಶ
2018ರ ಚುನಾವಣೆಯಲ್ಲಿ ಬಿ. ಸಿ. ಪಾಟೀಲ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು 72, 461 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಯು. ಬಿ. ಬಣಕಾರ 71, 906 ಮತಗಳನ್ನು ಪಡೆದು ಸೋತಿದ್ದರು. ಕ್ಷೇತ್ರದಲ್ಲಿ ಜೆಡಿಎಸ್ ನೆಲೆಯನ್ನು ಹೊಂದಿಲ್ಲ, ಕಳೆದ ಚುನಾವಣೆಯಲ್ಲಿ ಪಡೆದ ಮತ 3597.











Click it and Unblock the Notifications