R Shankar: ಶಿಗ್ಗಾಂವಿ ಉಪಚುನಾವಣೆ; ಕಾಂಗ್ರೆಸ್ ಟಿಕೆಟ್‌ಗೆ ಶುರುವಾಗಿದೆ ಬಿಗ್ ಫೈಟ್!
ಹಾವೇರಿ, ಜುಲೈ. 05: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಸಂಸದರಾಗಿ ಆಯ್ಕೆಯಾಗಿರುವುದರಿಂದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ನಡೆಯಲಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನಿಂತಿದೆ.
ಅವರಲ್ಲಿ, ಮಾಜಿ ಸಚಿವ ಮತ್ತು ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಮಾಜಿ ಸಚಿವ ಆರ್.ಶಂಕರ್ ಸೇರಿದಂತೆ ಅನೇಕ ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ಕಾನೂನು ಅಡೆತಡೆಗಳ ನಡುವೆಯೂ ತಮ್ಮ ಪತಿಯ ರಾಜಕೀಯ ಜೀವನಕ್ಕೆ ಕಾಣಿಕೆ ನೀಡಿದ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಇಲ್ಲಿನ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಇದರ ಜೊತೆಗೆ ಹಲವು ಕಾಂಗ್ರೆಸ್ ನಾಯಕರು ಟಿಕೆಟ್ ಘೋಷಣೆ ಮುಂಚೆ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಅದರಲ್ಲಿ ಮಾಜಿ ಸಚಿವ ಆರ್. ಶಂಕರ್ ಕೂಡ ಒಬ್ಬರು. ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಹಿರಂಗವಾಗಿಯೇ ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನೂ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದ್ದಾರೆ.
"ಸ್ಪರ್ಧೆ ಮಾಡುವ ಕುರಿತು ಸ್ಥಳೀಯ ಜನರು, ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿದ್ದೇನೆ. ಚರ್ಚೆಯ ಬಳಿಕ ನಾನು ಈ ನಿರ್ಧಾರಕ್ಕೆ ಬಂದಿದ್ದೆನೆ. ಬಹುತೇಕ ಎಲ್ಲರೂ ನಾನು ಸ್ಪರ್ಧಿಸಲು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ಪಕ್ಷ ಸಮೀಕ್ಷೆ ನಡೆಸಲಿ. ಗೆಲ್ಲುವವರಿಗೆ ಟಿಕೆಟ್ ನೀಡಲಿ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರು, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನೂ ಸಹ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಪ್ರಮುಖ ಆಕಾಂಕ್ಷಿ
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಗಳಿಸಿದ ಗಮನಾರ್ಹ ಮುನ್ನಡೆಯಿಂದ ಹುರುಪುಗೊಂಡಿರುವ ಕಾಂಗ್ರೆಸ್ ಆಕಾಂಕ್ಷಿಗಳು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಮೂರ್ನಾಲ್ಕು ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಹೆಸರು ಕೇಳಿ ಬರುತ್ತಿದೆ.
ಇವರ ಜೊತೆಗೆ ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮರದ್, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸೇರಿದಂತೆ ಹಲವು ಆಕಾಂಕ್ಷಿಗಳು ಕಣಕ್ಕೆ ಇಳಿಯುವ ಮೂಲಕ ಪೈಪೋಟಿ ಜೋರಾಗಿದೆ. ಶಿವಲೀಲಾಗೆ ಲಿಂಗಾಯತ, ಕುರುಬರಿಂದ ಬೆಂಬಲ ಸಿಗಲಿದೆ. ಮತ್ತೊಂದೆಡೆ, ಸಂಜೀವಕುಮಾರ ನೀರಲಗಿ ಅವರು ತಾನು ಸ್ಥಳೀಯ ಎಂಬ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ.
ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಬೇಕು ಮತ್ತು ಸ್ಥಳೀಯರಿಗೆ ಮೊದಲ ಪ್ರಾಮುಖ್ಯತೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರು ಮೊಹಮ್ಮದ್ ಹಾರಿಸ್ ನಲಪಾಡ್ ಅವರನ್ನು ಕಣಕ್ಕಿಳಿಸಲು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications