BJP Ticket: ಸಿಎಂ ತವರು ಜಿಲ್ಲೆ ಹಾವೇರಿಗೆ ಟಿಕೆಟ್ ಘೋಷಣೆ ಬಾಕಿ: ಕಾರಣವೇನು? ಹಾಲಿ ಶಾಸಕರಿಗೆ ಸಿಗುತ್ತಾ ಟಿಕೆಟ್? ವಿಶ್ಲೇಷಣೆ
ಬೆಂಗಳೂರು, ಏಪ್ರಿಲ್ 12: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಬಿಜೆಪಿಯು ಕಣ್ಣಕ್ಕಿಳಿಯುವ 189 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಆದರೆ ಮುಖ್ಯಮಂತ್ರಿಗಳು ತವರು ಜಿಲ್ಲೆಯ ಹಾವೇರಿ ಕ್ಷೇತ್ರದ ಟಿಕೆಟ್ ಘೋಷಿಸದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಆ ಪೈಕಿ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಿದೆ. ಆದರೆ ಹಾನಗಲ್ ಮತ್ತು ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ಮೊದಲ ಪಟ್ಟಿಯಲ್ಲಿ ನೀಡಲಾಗಿದೆ. ಹಾನಗಲ್ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿತ್ತು. ಹೀಗಾಗಿ ಹಾನಗಲ್ ಗೆ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ ಇದ್ದಂತಿದೆ.

ಆದರೆ ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡದಿರುವುದರಿಂದ ಸ್ಥಳಿಯ ಹಾಲಿ ಶಾಸಕ ಮತ್ತು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ನೆಹರು ಓಲೇಕಾರ್ ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ ಎನ್ನಲಾಗಿದೆ.
ಮೊದಲ ಪಟ್ಟಿಯನ್ನು ನೋಡಿದರೆ ಟಿಕೆಟ್ ಸಿಕ್ಕ ಎಲ್ಲ ಅಭ್ಯರ್ಥಿಗಳ ಪರ ಬಿಜೆಪಿ ಒಲವು ಹೊಂದಿದಂತಿದೆ. ಅವರ ಮೇಲೆ ಪಕ್ಷ ನಂಬಿಕೆ ಇಟ್ಟು ಮೊದಲೇ ಟಿಕೆಟ್ ನೀಡಿದೆ. ಆದರೆ ಪಕ್ಷದೊಂದಿಗೆ ಆಂತರಿಕವಾಗಿ ಸರಿಇಲ್ಲದ, ಅಭಿವೃದ್ಧಿ ಮಾಡದ ಹಾಗೂ ಕ್ಷೇತ್ರ ಕುರಿತು ದೂರದೃಷ್ಟಿ ಸೇರಿದಂತೆ ಇನ್ನಿತರ ಕಾರಣಗಳಿಗೆ ಸುಮಾರು 35 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.
ಉಪಚುನಾವಣೆ ವೇಳೆ ಶಾಸಕರ ಮುನಿಸು
ಒಂದು ವೇಳೆ ಎರಡನೇ ಪಟ್ಟಿಯಲ್ಲಿಯೂ ಹಾವೇರಿ ಶಾಸಕ ನೆಹರು ಓಲೇಕಾರ್ ಅವರಿಗೆ ಟಿಕೆಟ್ ಸಿಗದಿದ್ದರೆ ಅವರು ಆಕ್ರೋಶ, ಅಸಮಾಧಾನ ಹೊಂದುವ ಸಾಧ್ಯತೆಯು ದಟ್ಟವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಾರಣವೇನೆಂದರೆ, 2021ರಲ್ಲಿ ನಡೆದ ಉಪಚುನಾವಣೆಗೂ ಮುನ್ನ ಯಡಿಯೂರಪ್ಪ ಅವರ ನಂತರ ಹಾವೇರಿಯ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು.

ನಂತರ ವಿಸ್ತರಣೆಗೊಂಡ ಸಚಿವ ಸಂಪುಟದಲ್ಲಿ ಮಂತ್ರಿಯಾಗಬೇಕೆಂಬ ಮಹಾದಾಸೆ ಶಾಸಕ ನೆರಹೂ ಓಲೇಕಾರ್ ಅವರು ಹೊಂದಿದ್ದರು. ಆ ಬಗ್ಗೆ ಶತಾಯಗತಾಯ ಪ್ರಯಶ್ನಿಸಿರುವ ಅವರು ಸಂಪುಟ ಸೇರುವಲ್ಲಿ ವಿಫಲವಾದರು. ಇದರಿಂದ ಮುನಿಸಿಕೊಂಡಿದ್ದ ಅವರು ಹಾನಗಲ್ ಉಪಚುನಾವಣೆ ವೇಳೆ ಪ್ರಚಾರಕ್ಕೆ ಇಳಿಯಲಿಲ್ಲ.
ಶಾಸಕರ ನಡೆಯಿಂದ ಬೊಮ್ಮಾಯಿಗೆ ಬೇಸರ?
ರಾಜ್ಯಮಟ್ಟದ ನಾಯಕರು ಹಾನಗಲ್‌ನ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರನ್ನು ಬೆಂಬಲಿಸಲು ಪ್ರಚಾರಕ್ಕೆ ಬಂದರೂ ಇವರು ಓಲೇಕಾರ್ ಮಾತ್ರ ಅಸಮಾಧಾನ ತೋರ್ಪಡಿಸುತ್ತಲೇ ಇದ್ದರು. ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಶಾಸಕರನ್ನು ಸಮಾಧಾನ ಮಾಡಲು ಯತ್ನಿಸಿದ್ದರು. ಶಾಸಕರ ನಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇರುಸು ಮುರುಸು ಸಹ ಉಂಟು ಮಾಡಿತ್ತು ಎಂದು ಸ್ಥಳಿಯ ಮುಖಂಡರು ಮಾಹಿತಿ ನೀಡಿದ್ದಾರೆ.
ಇನ್ನೂ ಶಾಸಕರು ಇತ್ತೀಚೆಗೆ 50 ಲಕ್ಷ ರೂಪಾಯಿ ಕಾಮಗಾರಿಯೊಂದನ್ನು ತಮ್ಮ ಇಬ್ಬರು ಮಕ್ಕಳಿಗೇ ನೀಡಿದ ಆರೋಪ ಎದುರಿಸಿದ್ದರು. ಶಾಸಕರಿಗೆ ಮತ್ತು ಅವರಿಬ್ಬರ ಮಕ್ಕಳಾದ ದೇವರಾಜ್ ಓಲೇಕಾರ್ ಮತ್ತು ಮಂಜುನಾಥ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿಲಾಗಿತ್ತು. ಇದು ಸಹ ನೆಹರೂ ಓಲೆಕಾರ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವಾಗಬಹದು ಎನ್ನಲಾಗಿದೆ.

ಅಭ್ಯರ್ಥಿಗಳನ್ನು ಅಳೆದು ತೂಗಿ ಬಿಜೆಪಿ ಟಿಕೆಟ್
ಟಿಕೆಟ್ ಅಂತಿಮ ಗೊಳಿಸುವಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕ ರಾಜ್ಯದ ನಾಯಕರ ಜೊತೆಗೆ ಮೇಲಿಂದ ಮೇಲೆ ಸಭೆ ನಡೆಸಿದೆ. ಅಭ್ಯರ್ಥಿಗಳ ಪೂರ್ವಾಪರ ನೋಡಿ, ಕಾರ್ಯವೈಖರಿ, ಅಪರಾಧ ಹಿನ್ನೆಲೆ ನೋಡಿ ಅಳೆದು ತೂಗಿ ಟಿಕೆಟ್ ಅಂತಿಮಗೊಳಿಸಿದೆ. ಈ ಕಾರಣಕ್ಕೆ ಟಿಕೆಟ್ ಘೋಷಣೆ ತಡವಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ.
ಇದೆಲ್ಲವನ್ನು ನೋಡಿದರೆ, ಓಲೇಕಾರ್ ಅವರು ಭ್ರಷ್ಟಾಚಾರ ಆರೋಪ ಹೊತ್ತು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರು ಮತ್ತು ಪಕ್ಷ ಇಲ್ಲವೇ ಮುಖ್ಯಮಂತ್ರಿಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದೆ. ಇದೆಲ್ಲ ನೋಡಿದರೆ ಬಿಜೆಪಿ ಹಾಲಿ ಶಾಸಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಿದೆಯೋ ಇಲ್ಲ, ಹೊಸಬರಿಗೆ ಮಣೆ ಹಾಕಲಿದೆಯೋ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಹಾವೇರಿ: 1ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರ ವಿವರ
ಶಿಗ್ಗಾಂವ್- ಸಿಎಂ ಬಸವರಾಜ ಬೊಮ್ಮಾಯಿ
ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು - ಬಿ.ಸಿ.ಪಾಟೀಲ್
ರಾಣಿಬೆನ್ನೂರು- ಅರುಣ್ ಕುಮಾರ್ ಪೂಜಾರ್











Click it and Unblock the Notifications