Mekedatu: ಮೇಕೆದಾಟು ಯೋಜನೆ ಸಮಸ್ಯೆಗೆ ಮುಕ್ತಿ ಕಾಣಿಸಿ: ಏಪ್ರಿಲ್ 10ಕ್ಕೆ ಬಿಜೆಪಿ ಪ್ರತಿಭಟನೆ
ಹಾವೇರಿ, ಏಪ್ರಿಲ್ 06: ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಹಿಂದೆ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿದ್ದರು. ಈಗ ಅವರ ಮಿತ್ರ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರ ಜೊತೆಗೆ ಐದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತೋರಿಸಬೇಕು ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಹಾವೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಈಗಾಗಲೇ ಡಿಪಿಆರ್‌ಗೆ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆಯ ಅನುಮತಿ ಅತಿ ಶೀಘ್ರವೇ ಸಿಗಲಿದೆ. ಎತ್ತಿನ ಹೊಳೆ ಯೋಜನೆಗೆ ಕೇಂದ್ರದ ಯಾವುದೇ ಅನುಮತಿ ಅಗತ್ಯವಿಲ್ಲ. ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ಆಗ ನಾವು ಈ ಪ್ರಕರಣ ಅಂತಾರಾಜ್ಯ ವಿವಾದದಲ್ಲಿ ಕೋರ್ಟ್‌ನಲ್ಲಿದೆ ಅಂತ ಹೇಳಿದಾಗ ಕಾಂಗ್ರೆಸ್ ನಾಯಕರು ತಾವು ಅನುಮತಿ ತರುತ್ತೇವೆ ಎಂದಿದ್ದರು ಎಂಬುದನ್ನು ಅವರು ನೆನಪಿಸಿದರು.

ಈಗ ಅವರ ಮಿತ್ರ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರ ಜೊತೆಗೆ 05 ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ನಾಯಕರು ತೋರಿಸಬೇಕು. ಮಹತ್ವದ ಯೋಜನೆಗೆ ಜಾರಿಗೆ ಮುಂದಾಗಬೇಕು ಎಂದರು. ಕೋವಿಡ್ ಹಗರಣದ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರು ನೀಡಿದ ಮಧ್ಯಂತರ ವರದಿ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ವರದಿಯ ವಿವರ ಮಾಹಿತಿ ಇಲ್ಲ ಎಂದು ತಿಳಿಸಿದರು.
ಏಪ್ರಿಲ್ 10ಕ್ಕೆ ಬಿಜೆಪಿ ನಾಯಕರ ಧರಣಿ
ರಾಜ್ಯ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ವಿರುದ್ಧ ಏಪ್ರಿಲ್ 10 ರಂದು ಬಿಜೆಪಿ ಹಗಲು ರಾತ್ರಿ ಧರಣಿ ನಡೆಸಲಿದೆ. ಬಿಜೆಪಿ ಸಂಸ್ಥಾಪನೆಯಾಗಿ 45 ವರ್ಷಗಳಾಗಿವೆ. ನಮ್ಮ ಹಿರಿಯರು ಕಟ್ಟಿರುವ ಪಕ್ಷವನ್ನು ಆ ಧೈಯ ಉದ್ದೇಶ ಆದರ್ಶಗಳಿಗೆ ಅನುಗುಣವಾಗಿ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ನಾವು ಇಂದು ಆಚರಣೆ ಮಾಡಿದ್ದೇವೆ. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಬಂದಿದೆ ಎಂದರು.
ಇದೇ ವೇಳೆ ವಕ್ಫ್ ತಿದ್ದುಪಡಿ ವಿಧೇಯಕ ಜಾರಿ ಕುರಿತ ಪಶ್ನೆಗೆ ಉತ್ತರಿಸಿದ ಅವರು,ರಾಷ್ಟ್ರದಲ್ಲಿ ರೂಲ್ ಆಫ್ ಲಾ ಸ್ಥಾಪನೆ ಆಗಬೇಕು. ವಕ್ಫ್ ಹೆಸರಿನಲ್ಲಿ ದೇವಸ್ಥಾನ, ಸರ್ಕಾರಿ ಕಚೇರಿಗಳು, ಸಂಸತ್ತು ಭವನ ವಕ್ಸ್ ಆಸ್ತಿ ಎಂದು ಹೇಳಿದ್ದಾರೆ. ಅವೆಲ್ಲಕ್ಕೂ ತೆರೆ ಬೀಳಲಿದೆ. ಹಲವಾರು ರೈತರಿಗೆ, ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ.

ಅವರು ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಅದಕ್ಕೆ ಕಾನೂನು ಪುನರ್ ಸ್ಥಾಪನೆಯಾಗಲಿದೆ. ಬರುವ ದಿನಗಳಲ್ಲಿ ಎಲ್ಲರಿಗೂ ನ್ಯಾಯ ಕೊಡಲು ನಿರ್ಣಯವಾಗಿದೆ. ಅದು ಜಾರಿಯಾದಾಗ ಎಲ್ಲರಿಗೂ ಅನುಭವಕ್ಕೆ ಬರುತ್ತದೆ ಎಂದು ವಿವರಿಸಿದರು.












Click it and Unblock the Notifications