ರಾಜಕಾರಣದಲ್ಲಿ ರೌಡಿಸಂ ಸಹಿಸಲ್ಲ: ಸಲಹೆ ಕೊಡುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ
ಹಾವೇರಿ, ಏಪ್ರಿಲ್ 16: ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಸಲಹೆ ಕೊಡುವಷ್ಟು ಸಿಎಂ ಸಿದ್ದರಾಮಯ್ಯ ದೊಡ್ಡವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ. ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಹಾವೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದನ್ನು ಅವರು ಖಂಡಿಸಿದರು.

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತ ಮಾಡಲು ನಮಗೆ ಅವಕಾಶ ಇದೆ. ಅದನ್ನು ಬಿಟ್ಟು ಮಾಜಿ ಪ್ರಧಾನಿ ಕನ್ನಡಿಗರ ಹೆಮ್ಮೆಯ ದೇವೇಗೌಡರ ಸಭೆಯಲ್ಲಿ ಆ ರೀತಿ ದಾಂಧಲೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಜನರು ಎಲ್ಲವನ್ನೂ ನೋಡುತ್ತಾರೆ. ವಿಶೇಷವಾಗಿ ದೇವೇಗೌಡರು ಕನ್ನಡದ ಸಲುವಾಗಿ ಕನ್ನಡಿಗರಿಗಾಗಿ ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ: ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ನ ಅನೇಕ ನಾಯಕರು ಮಹಿಳೆಯರ ಬಗ್ಗೆ ಸಾಕಷ್ಟು ಅವಮಾನಕಾರಕ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾದಿ ರಣದೀಪ್ ಸಿಂಗ್ ಸುರ್ಜೆವಾಲ ಮಹಿಳೆಯ ಬಗ್ಗೆ ಆಡಿರುವ ಮಾತಿಗೆ ಕಾಂಗ್ರೆಸ್ ನವರು ಸ್ಪಷ್ಟೀಕರಣ ನೀಡಲಿ ಎಂದು ಸವಾಲು ಹಾಕಿದರು.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಕಾಂಗ್ರೆಸ್ ನವರು ಅದನ್ನು ತಡೆಯುವ ಕೆಲಸ ಮಾಡಲಿ ಎಂದು ಬೊಮ್ಮಾಯಿ ಅವರು ತಿರುಗೇಟು ನೀಡಿದರು.
ಸಲಹೆ ನೀಡುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ
ಮಾಜಿ ಪ್ರಧಾನಿ ದೇವೇಗೌಡರ ಕುರಿತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ದೇವೇಗೌಡರಿಗೆ ಬುದ್ಧಿ ಹೇಳುವಷ್ಟು ದೊಡ್ಡವರು ಯಾರೂ ಇಲ್ಲ. ಅವರಿಗೆ ಸಲಹೆ ನೀಡುವಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಿಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣ ಆಗಲಿದೆ. ಮೈತ್ರಿ ಪಕ್ಷಗಳು ಗೆಲ್ಲಲಿವೆ. ಈ ಚುನಾವಣೆ ಬಳಿಕ ರಾಜ್ಯದಲ್ಲಿರುವ ಕಾಂಗ್ರೆಸ್‌ನಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಅವರು ಭವಿಷ್ಯ ನುಡಿದರು.
ಎಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?
ಗ್ಯಾರೆಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಂಡ್ಯ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರು ಅಪಮಾನ ರೀತಿಯಲ್ಲಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಎಚ್‌ಡಿಕೆ ಹೇಳಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆಗೆ ಕರೆ ನೀಡಿದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಕೆಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೆ ತುಮಕೂರಿನಲ್ಲಿ ಎಚ್‌ಡಿ ದೇವೇಗೌಡ ಅವರು ಸಭೆ ನಡೆಸುವಾಗ ಸಭೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಇದು ರಾಜಕಾರಣದಲ್ಲಿನ ರೌಡಿ ವರ್ತನೆ ಆಗಿದ್ದು, ಇಂತದ್ದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.












Click it and Unblock the Notifications