GST ಜಾರಿಯಿಂದ ರಾಜ್ಯಗಳು ದಿವಾಳಿ ಆಗುವುದು ತಪ್ಪಿದೆ: ಮಾಜಿ ಸಿಎಂ
ಹಾವೇರಿ, ಏಪ್ರಿಲ್ 10: ಜಿಎಸ್ ಟಿ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಅನೇಕ ರಾಜ್ಯಗಳು ದಿವಾಳಿಯಾಗುವುದು ತಪ್ಪಿದೆ. ಸುಮ್ಮನೇ ಜಿಎಸ್ ಟಿ ವ್ಯವಸ್ಥೆಯ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ದೂರಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜಿಯರ್ಸ್ ಅಸೊಸಿಯೇಷನ್, ಅಗ್ರಿಕಲ್ಚರ್ ಗ್ರಾಜುಯೇಟ್ಸ್ ಅಸೋಷಿಯೇಷನ್, ಟ್ಯಾಕ್ಸ್ ಪೇಯರ್ಸ್ ಅಸೋಷಿಯೇಷನ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಐದು ವರ್ಷ ಶೇ 14% ರಷ್ಟು ಪರಿಹಾರ ನೀಡಿದೆ. ಯಾವ ರಾಜ್ಯವೂ ಶೇ 14 ರಷ್ಡು ಜಿಎಸ್ ಟಿ ಸಂಗ್ರಹ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಕರ್ನಾಟಕದ ಜಿಎಸ್ ಟಿ ಸಂಗ್ರಹ ಶೇ 11% ರಷ್ಟು ಮಾತ್ರ ಇದೆ. ಸುಮ್ಮನೇ ಜಿಎಸ್ ಟಿ ವ್ಯವಸ್ಥೆಯ ವಿರುದ್ದ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಸಂಘ-ಸಂಸ್ಥೆಗಳ ಅಭಿಪ್ರಾಯ ಪಡೆದು ನಿರ್ಧಾರ
ಬೇರೆ ಬೇರೆ ವೃತ್ತಿಯ ಸಂಘಗಳವರು ಎಲ್ಲರೂ ಒಂದೆಡೆ ಸಭೆ ಸೇರಿರುವುದು ಒಳ್ಳೆಯ ವಿಷಯ. ಮನುಷ್ಯ ಸಂಘ ಜೀವಿ, ಸಮಾಜ ಜೀವಿ, ಒಬ್ಬನೇ ಬದುಕುವುದು ಕಷ್ಟ. ಒಬ್ಬರಿಗೊಬ್ಬರು ಸಹಕಾರ ನೀಡಬೆಕು. ಒಬ್ಬರಿಂದ ಯಾವುದೇ ಕೆಲಸ ಆಗುವುದಿಲ್ಲ. ಚೈನಾದಲ್ಲಿ ನಿರಂಕುಶ ಪ್ರಭುತ್ವ ಇದೆ. ಆದರೂ ಅಲ್ಲಿ ಅಲ್ಲಿಯೇ ಅವರು ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ತೆರಿಗೆ ಸರಿಯಾದ ಕಾರಣಕ್ಕೆ ಹಾಕಬೇಕು. ಅದು ಇಕ್ವಿಟೆಬಲ್, ಅಕೌಂಟೇಬಲ್ ಆಗಿರಬೇಕು. ತೆರಿಗೆ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು.

ಸೇವಾ ವಲಯ ಅಭಿವೃದ್ಧಿ
ಹಸಿರು ಕ್ರಾಂತಿಯಾಗಲು ಬೀಜ ಅಭಿವೃದ್ಧಿ ಮುಖ್ಯ, ಸೀಡ್ ಡೆವೆಲಪ್ ಮೆಂಟ್ ಮಾಡಿ ಕೃಷಿಯಲ್ಲಿ ಪ್ರಯೋಗ ಮಾಡಿದಾಗ ಯಶಸ್ವಿಯಾಗಿದೆ. ಕೃಷಿಯಲ್ಲಿ ಶೇಕಡಾ 1 ರಷ್ಟು ಅಭಿವೃದ್ದಿಯಾದರೆ ಉತ್ಪಾದನಾ ವಲಯದಲ್ಲಿ ಶೇಕಡಾ 4 ರಷ್ಟು ಉತ್ಪಾದನೆ ಆಗುತ್ತದೆ. ಇದರಿಂದ ಸೇವಾ ವಲಯದಲ್ಲಿ ಶೇಕಡಾ 10ರಷ್ಟು ಅಭಿವೃದ್ಧಿ ಆಗುತ್ತದೆ.
ನಮ್ಮ ದೇಶದಲ್ಲಿ ಎಂಜನೀಯರ್ಸ್ ಗಳಿಗೆ ಅವಕಾಶ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಎಂಜನೀಯರ್ ಗಳ ಪ್ರಮಾಣ ಪತ್ರ ಇಲ್ಲದೇ ಯಾವುದೇ ಕೆಲಸ ಮಾಡಬಾರದು ಎಂಬ ಕಾನೂನು ಜಾರಿಗೆ ತರಲಾಗಿದೆ ಎಂದು ಮಾಹಿತಿ ಕೊಟ್ಟರು.












Click it and Unblock the Notifications