ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ, ಸೆಪ್ಟೆಂಬರ್ 10: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾನು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಅಂತಾ ನಾನು ಎಲ್ಲಾದರೂ ಹೇಳಿದ್ದೇನಾ ಎಂದು ಪ್ರಶ್ನಿಸಿದರು.

ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಹಾವೇರಿ ಹಾಗೂ ಗದಗ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಬಗ್ಗೆ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಂಡಿದ್ದೆವೆ. ಪಕ್ಷದ ಅಧ್ಯಕ್ಷರು ಪದಾಧಿಕಾರಿಗಳು ಸೇರಿ ತಂಡ ಮಾಡಿ ಕೋರ್ ಸಮಿತಿ ಮಾಡಬೇಕು ಎಂಬ ನಿರ್ಣಯ ಆಗಿತ್ತು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ರೂಪಿಸುವ ಬಗ್ಗೆ ಸಭೆಯಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ. ಬೂತ್ ಮಟ್ಟದಿಂದ ಮತ್ತೆ ಸಂಘಟನೆ ಮಾಡುವುದು, ಯುವಕರಿಗೆ, ಮಹಿಳೆಯರಿಗೆ, ಒಬಿಸಿಯವರಿಗೆ ಹೆಚ್ಚಿನ ಪ್ರಧಾನ್ಯತೆ ಕೊಡುವುದು. ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಜೆಡಿಎಸ್- ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ ಏನು ನಡೆದಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಈ ಅನಿಷ್ಟ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುವ ಭಾವನೆ ಎಲ್ಲರಿಗೂ ಇದೆ. ಅಮಿತ್ ಶಾ- ದೇವೇಗೌಡರ ಭೇಟಿ ಸ್ವಾಗತಾರ್ಹ. ಜೆಡಿಎಸ್ ಅವರು ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಕೆಲವೇ ವಾರಗಳಲ್ಲಿ ಯಾರಿಗೆ ಎಷ್ಟು ಕ್ಷೇತ್ರ ಎನ್ನುವ ಅಂಕಿ ಸಂಖ್ಯೆ ಸ್ಪಷ್ಟ ಆಗಲಿದೆ ಎಂದರು.
ಅಧಿಕಾರಕ್ಕೆ ಬಂದಾಗಿನಿಂದ ಹಲವು ವಿಚಾರಗಳಲ್ಲಿ ಈ ಸರ್ಕಾರ ವಿಫಲ ಆಗಿದೆ. ಸಂಪೂರ್ಣ ಅಭಿವೃದ್ಧಿ ನಿಂತು ಹೋಗಿದೆ. ಹಿಡಿ ಮಣ್ಣು ಹಾಕುವ ಕಾರ್ಯಕ್ರಮ ಮಾಡಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ. ಅನೇಕರು ಸಿಎಂಗೆ ಪತ್ರ ಬರೆದಿದ್ದಾರೆ. ಆದರೂ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ವಿಶೇಷ ವ್ಯಾಖ್ಯಾನ ಮಾಡಿದ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಒನ್ ಹಾಗೂ ಸಿದ್ದರಾಮಯ್ಯ ಟೂ ನಡುವೆ ಬಹಳಷ್ಟು ವ್ಯತ್ಯಾಸ ಇದೆ. 2013-18 ವರೆಗಿನ ಸಿದ್ದರಾಮಯ್ಯ ಒನ್ ಮತ್ತು 2023ರ ಸಿದ್ದರಾಮಯ್ಯ 2 ಗೂ ಬಹಳಷ್ಟು ವ್ಯತ್ಯಾಸ ಇದೆ ಎಂದು ವ್ಯಂಗ್ಯವಾಡಿದರು.
ಈಗ ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆದರೂ ಏನು ಮಾಡದ ಸ್ಥಿತಿಯಲ್ಲಿದ್ದಾರೆ. ಅದಕ್ಕಾಗಿ ಬರಗಾಲ ಘೋಷಣೆ ಆಗಿಲ್ಲ. ಡಿಸಾಸ್ಟರ್ ಮ್ಯಾನೇಜ್ಮೆಂಟ್‌ಗೆ ಕೇಂದ್ರ ಹಣ ಬಿಡುಗಡೆ ಮಾಡಿದರೂ ಬಳಸಿಲ್ಲ. ಇವರಿಗೆ ರೈತ ವಿರೋಧಿ ಅನ್ನದೇ ಇನ್ನೇನು ಅನ್ನಲು ಸಾಧ್ಯ. ರೈತರ ಆತ್ಮಹತ್ಯೆಯ ಬಗ್ಗೆ ಗಂಭೀರತೆ ಇಲ್ಲ ಎಂದು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಮಹದಾಯಿ ವಿಚಾರದಲ್ಲಿ ಕೇಂದ್ರಕ್ಕೆ ಆಸಕ್ತಿ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಟ್ರಿಬುನಲ್ ಮಾಡಿ ಅಂತ ಅಫಿಡವಿಟ್ ಕೊಟ್ಟರು. ಅದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ. ಮಹದಾಯಿ ಯೋಜನೆ ಆಗಬಾರದು ಅಂತ ಗೋವಾದವರು ಗೋಡೆ ಕಟ್ಟಿದರು. ನೀರು ಹೇಗೆ ಬರುತ್ತದೆ. ಆಗ ಸಿದ್ದರಾಮಯ್ಯ ಯಾಕೆ ಮಾತನಾಡಲಿಲ್ಲ? ಪರಿಸರ ಅನುಮತಿ ನೀಡುವ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಇದೆ.ಇವರು ಕ್ಲಿಯರನ್ಸ್ ಪಡೆಯಲಿ ಎಂದು ಹೇಳಿದರು.












Click it and Unblock the Notifications