Get Updates
Get notified of breaking news, exclusive insights, and must-see stories!

ವಿಧಾನಸಭೆ ಚುನಾವಣೆ 2023: ಹಿರೇಕೆರೂರಿನಲ್ಲಿ ಧೂಳೆಬ್ಬಿಸಿದ ಕಿಚ್ಚ-ಕೌರವನ ಜುಗಲ್‍ಬಂದಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿನಿಮಾ ತಾರೆಯರ ಪ್ರಚಾರವೂ ಅಬ್ಬರದಿಂದ ಕೂಡಿದೆ.

ಕಳೆದ ಎರಡು ದಿನಗಳಿಂದ ಸತತವಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಕಿಚ್ಚ ಸುದೀಪ್, ಇಂದು ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಇದಕ್ಕೂ ಮುನ್ನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು.

Assembly Elections 2023: Kichcha Sudeep Campaigned For BJP Candidates In Haveri District

ಗುರುವಾರ, ಏಪ್ರಿಲ್ 27ರಂದು ಬಿಜೆಪಿ ಅಭ್ಯರ್ಥಿಗಳ ಪರ ನಟ ಕಿಚ್ಚ ಸುದೀಪ್ ಭರ್ಜರಿ ಪ್ರಚಾರ ಮಾಡಿದರು. ಬಳ್ಳಾರಿಯ ಕೂಡ್ಲಿಗಿಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಪರ ಮತಯಾಚನೆ ಪ್ರಚಾರ ನಡೆಸಿದರು.

ನಂತರ ಅಲ್ಲಿಂದ ನೇರವಾಗಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಬಂದ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಪರ 2 ಕಿಮೀ ರೋಡ್ ಶೋ ನಡೆಸಿದರು. ಈ ವೇಳೆ ಸಾವಿರಾರು ಅಭಿಮಾನಿಗಳು ಡೊಳ್ಳು, ನಗಾರಿ ಬಾರಿಸಿ ಸುದೀಪ್‌ಗೆ ಅದ್ಧೂರಿ ಸ್ವಾಗತ ಕೋರಿದರು.

ಬಳಿಕ ಬ್ಯಾಡಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್ ಅಲ್ಲಿಂದ ಹಿರೇಕೆರೂರಿಗೆ ತೆರಳಿದರು. ಅಲ್ಲಿನ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.

Assembly Elections 2023: Kichcha Sudeep Campaigned For BJP Candidates In Haveri District

ಬಿ.ಸಿ. ಪಾಟೀಲ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಸಿನಿಮಾ ಕ್ಷೇತ್ರದವರಾಗಿರುವುದರಿಂದ ಹಿರೇಕೆರೂರಿನಲ್ಲಿ ಅಭಿಮಾನಿಗಳ ಮಹಾ ಸಂಗಮವಾಗಿತ್ತು. ಕಿಚ್ಚ ಮತ್ತು ಕೌರವ ಖ್ಯಾತಿಯ ಸುದೀಪ್ ಹಾಗೂ ಬಿ.ಸಿ. ಪಾಟೀಲ್‌ರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟರು.

ನಂತರ ಮಾತನಾಡಿದ ಕಿಚ್ಚ ಸುದೀಪ್, ಭಾರತ ಸುಭಿಕ್ಷವಾಗಿ ಇರಬೇಕೆಂದರೆ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಅವರ ಮಾರ್ಗದರ್ಶನದಲ್ಲಿ ದೇಶ ಮತ್ತು ರಾಜ್ಯಗಳು ಮುನ್ನಡೆಯಲಿ. ಇದು ಸಾಧ್ಯವಾಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದರು.

ಹಿರೇಕೆರೂರು ತಾಲ್ಲೂಕಿನಲ್ಲಿ ಬಿ.ಸಿ. ಪಾಟೀಲರು ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದಕ್ಕೆ ಇಂದು ನಿಮ್ಮ ಉತ್ಸಾಹ ನೋಡಿದರೆ ಗೊತ್ತಾಗುತ್ತದೆ. ನೀವು ನಿಮ್ಮ ಜನನಾಯಕನ ಮೇಲೆ ಇಟ್ಟ ಪ್ರೀತಿ, ಅಭಿಮಾನ ಇದರಿಂದ ಗೊತ್ತಾಗುತ್ತಿದೆ. ಇಲ್ಲಿ ಸೇರಿರುವ ತಾವೆಲ್ಲ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ನಂತರ ಮಾತನಾಡಿದ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್, ಕರ್ನಾಟಕದ ಹೆಮ್ಮೆಯ ನಟ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್ ಇಂದು ನಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿರುವುದು ನನಗೆ ಶಕ್ತಿ ಬಂದಂತಾಗಿದೆ. ನನ್ನ ಅಭಿವೃದ್ಧಿ ಕೆಲಸಗಳು ಯಾವತ್ತೂ ಕೈಬಿಡಲ್ಲ ಎಂದು ಹೇಳಿದರು.

ಶುಕ್ರವಾರ ಗದಗದಲ್ಲಿ ಕಿಚ್ಚನ ಅಬ್ಬರ

ಕಿಚ್ಚ ಸುದೀಪ್ ಅವರು ಶುಕ್ರವಾರದಂದು ಗದಗ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ನೆಚ್ಚಿನ ನಟನನ್ನು ಬರಮಾಡಿಕೊಳ್ಳಲು ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ, ಕಿಚ್ಚನ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಗದಗ ನಗರದ ತುಂಬಾ ಕಿಚ್ಚನ ಕಟೌಟ್ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ಗದಗ ಬಿಜೆಪಿ ಕ್ಷೇತ್ರದ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಅಭ್ಯರ್ಥಿಗಳ ಪರವಾಗಿ ಕಿಚ್ಚ ಸುದೀಪ್ ಮತಯಾಚನೆ ಮಾಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+