ಅಮೂಲ್ ನಂತರ ಮತ್ತೊಂದು ವಿವಾದ: ಬ್ಯಾಡಗಿ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ ಗುಜರಾತಿ ಮೆಣಸಿನಕಾಯಿ- ಮಾಹಿತಿ, ವಿವರ
ಹಾವೇರಿ, ಏಪ್ರಿಲ್ 12: ಅಮೂಲ್- ನಂದಿನಿ ವಿವಾದದ ನಂತರ ಇದೀಗ ಗುಜರಾತ್ ಮೆಣಸಿನಕಾಯಿ ವಿವಾದವನ್ನು ಸೃಷ್ಟಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಬೆಂಗಳೂರು ಮಾರುಕಟ್ಟೆಗೆ ಅಮೂಲ್‌ನ ಪ್ರವೇಶವು ದೇಶದಾದ್ಯಂತ ದೊಡ್ಡ ರಾಜಕೀಯ ವಿವಾದವನ್ನೇ ಸೃಷ್ಟಿಸಿದೆ. ಈಗ ಗುಜರಾತಿ ಮೆಣಸಿನಕಾಯಿ 'ಪುಷ್ಪಾ' ( ಇದನ್ನು ಲಾಲಿ ಎಂದೂ ಕರೆಯುತ್ತಾರೆ ) ರಾಜ್ಯ ರಾಜಕಾರಣದಲ್ಲಿ ವಿವಾದವನ್ನು ಹುಟ್ಟುಹಾಕಲಿದೆ ಎಂದು ವರದಿ ಆಗಿದೆ.
ಗುಜರಾತಿ ಮೆಣಸಿನಕಾಯಿ 'ಪುಷ್ಪಾ' ಈಗ ಏಷ್ಯಾದ ಅತಿದೊಡ್ಡ ಮೆಣಸಿನಕಾಯಿ ಮಾರುಕಟ್ಟೆಗಳಲ್ಲಿ ಒಂದಾದ ಕರ್ನಾಟದ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನವನ್ನು ಉಂಟು ಮಾಡಿದೆ.

ಮೂಲಗಳ ಪ್ರಕಾರ, ಇತ್ತೀಚಿನ ತಿಂಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20, 000 ಕ್ವಿಂಟಲ್ ಗುಜರಾತ್ ಮೆಣಸಿನಕಾಯಿ ಮಾರಾಟವಾಗಿದೆ. ಪುಷ್ಪಾ ತಳಿಯು ಸ್ಥಳೀಯ ಡಬ್ಬಿ ಮತ್ತು ಕಡ್ಡಿ ತಳಿಗಳಿಗೆ ಪ್ರತಿಸ್ಪರ್ಧಿಯಲ್ಲದಿದ್ದರೂ, ಗುಜರಾತ್‌ನ ಈ ತಳಿಯು ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.
ಪುಷ್ಪ ಮೆಣಸಿನಕಾಯಿಗಳು ಸ್ಥಳೀಯ ತಳಿಗಳಿಗಿಂತ ಹೆಚ್ಚು ಕೆಂಪಾಗಿ ಕಾಣುತ್ತವೆ. ಆದರೂ ಅವುಗಳು ತಮ್ಮ ಕಡುಗೆಂಪು ಬಣ್ಣವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಕನಿಷ್ಠ 70 ಮೆಣಸಿನಕಾಯಿ ಮಾರಾಟಗಾರರು ಮಾರುಕಟ್ಟೆಯ ಬಳಿ ವಿವಿಧ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಗುಜರಾತ್ ಮೆಣಸಿನಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ ಎಂದು ಬ್ಯಾಡಗಿ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಬ್ಯಾಡಗಿಯಲ್ಲಿ ಹಠಾತ್ ಬೆಲೆ ಏರಿಕೆಯ ಲಾಭವನ್ನು ಪಡೆದುಕೊಂಡು, ಗುಜರಾತ್ ಮೆಣಸಿನಕಾಯಿ ಬಿರುಸಿನ ವ್ಯಾಪಾರವನ್ನು ಕಂಡಿದೆ. ಆದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಸಾಕಷ್ಟು ಪ್ರಮಾಣದ ಪುಷ್ಪ ಮೆಣಸಿನಕಾಯಿ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
'ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ಡಬ್ಬಿ ಮತ್ತು ಕಡ್ಡಿ ತಳಿಗಳ ಮೇಲೆ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ವಿವಿಧ ರಾಷ್ಟ್ರಗಳು ಮತ್ತು ಕಂಪನಿಗಳು ಬ್ಯಾಡಗಿ ಮೆಣಸಿನಕಾಯಿಯನ್ನು ಹಲವು ವರ್ಷಗಳಿಂದ ಅವಲಂಬಿಸಿವೆ. ಹೀಗಾಗಿ ಸ್ಥಳೀಯ ಮೆಣಸಿನಕಾಯಿಗಳ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ಸರ್ಕಾರ ನೋಡಿಕೊಳ್ಳಬೇಕು' ಎಂದು ರಾಣೆಬೆನ್ನೂರು ತಾಲ್ಲೂಕಿನ ರೈತರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
'ಈ ಋತುವಿನಲ್ಲಿ ಗುಜರಾತ್ ಮೆಣಸಿನಕಾಯಿಯ ಪೂರೈಕೆಯು ಸ್ಥಿರವಾಗಿ ಹೆಚ್ಚುತ್ತಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಖರೀದಿದಾರರು ರಾಷ್ಟ್ರದ ಎಲ್ಲಿಂದಲಾದರೂ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು ಮತ್ತು ಮಾರುಕಟ್ಟೆ ಸಮಿತಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ' ಎಂದು ಬ್ಯಾಡಗಿ ಎಪಿಎಂಸಿ ಹೆಚ್ಚುವರಿ ನಿರ್ದೇಶಕ ಮತ್ತು ಕಾರ್ಯದರ್ಶಿ ಎಚ್.ವೈ.ಸತೀಶ್ ಹೇಳಿದ್ದಾರೆ.

ಹಾಗಾಗಿ, ಎಪಿಎಂಸಿಗೆ ಪೂರೈಕೆ ನಿರ್ಬಂಧಿಸುವುದು ಕಷ್ಟವಾಗುತ್ತದೆ. ಮೇಲಾಗಿ ಡಬ್ಬಿ ಮತ್ತು ಕಡ್ಡಿ ತಳಿಗಳು ತಮ್ಮದೇ ಆದ ಖ್ಯಾತಿಯನ್ನು ಹೊಂದಿರುವುದರಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪುಷ್ಪ ಅಪಾಯವನ್ನುಂಟು ಮಾಡುವುದಿಲ್ಲ' ಎಂದು ಸತೀಶ್ ವಿವರಿಸಿದ್ದಾರೆ.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ಇತ್ತೀಚೆಗೆ ಬೆಂಗಳೂರಿನಲ್ಲಿ ತ್ವರಿತ ವಾಣಿಜ್ಯ ವೇದಿಕೆಗಳ ಮೂಲಕ ಅಮೂಲ್ ಹಾಲು ಮತ್ತು ಮೊಸರನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದೆ. ಕರ್ನಾಟಕದ ವಿರೋಧ ಪಕ್ಷದ ನಾಯಕರು ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೆಎಂಎಫ್ ಒಡೆತನದ ನಂದಿನಿ ಬ್ರಾಂಡ್‌ನ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಅದಾನಿಗೆ ಹಸ್ತಾಂತರಿಸಲಾಗಿದೆ. ಅದರಂತೆಯೇ ನಂದಿನಿಯನ್ನು ಅಮೂಲ್‌ಗೆ ಹಸ್ತಾರಿಸಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅಮೂಲ್ ಮತ್ತು ಕೆಎಂಎಫ್ ನಡುವೆ ಯಾವುದೇ ವಿಲೀನವಿಲ್ಲ. ಅಮೂಲ್ ರಾಜ್ಯದಲ್ಲಿ ಪ್ರವೇಶಿಸುತ್ತಿಲ್ಲ ಎಂದು ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವೀಯಾ ಹೇಳಿದ್ದಾರೆ.












Click it and Unblock the Notifications