ತವರು ಕ್ಷೇತ್ರದ ಅಭಿವೃದ್ಧಿಗೆ 20 ಕೋಟಿ ವಿಶೇಷ ಅನುದಾನ ನೀಡಿದ ಸಿಎಂ
ಹಾವೇರಿ, ಫೆಬ್ರವರಿ 13; "ಶಿಗ್ಗಾಂವಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಈ ಕ್ಷೇತ್ರಕ್ಕೆ ನೀಡಿರುವುದು ಇದೇ ಮೊದಲು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನದಿಂದ ತವರು ಜಿಲ್ಲೆ ಪ್ರವಾಸದಲ್ಲಿದ್ದಾರೆ. ಭಾನುವಾರ ಅವರು ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, "ಶಿಗ್ಗಾಂವಿಯ ಸಮಗ್ರ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಶಿಗ್ಗಾಂವಿಯ ವಿದ್ಯುಚ್ಛಕ್ತಿ ಸ್ಥಿರೀಕರಣ ಹಾಗೂ ಔದ್ಯೋಗೀಕರಣಕ್ಕೆ ಬಹಳ ದೊಡ್ಡ ಸಹಾಯ ಇದರಿಂದ ಆಗಲಿದೆ. ವಿದ್ಯುಚ್ಛಕ್ತಿ ವಿತರಣೆಗೆ ಈ ಉಪಕೇಂದ್ರಗಳ ಅವಶ್ಯಕತೆ ಇದ್ದು. ಇಡೀ ತಾಲ್ಲೂಕಿನ ಅಭಿವೃದ್ಧಿಗೆ ಇದು ಪೂರಕವಾಗಿದೆ. 750 ಮತ್ತು 110 ಕೆವಿ ಉಪಕೇಂದ್ರಗಳನ್ನು ಇಲ್ಲಿ ಮಂಜೂರು ಮಾಡಲಾಗಿದೆ" ಎಂದರು.

ಕುರುಬ ಸಮುದಾಯದ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನವನ್ನು 3 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲು ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿಗಂದ ಗಂಜಿಗಟ್ಟಿ ಗ್ರಾಮದವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು.
"ಹಿಂದುಳಿದ ವರ್ಗದ ಜನ ಇತರರಂತೆ ಶಿಕ್ಷಣದಲ್ಲಿ ಮುಂದುವರೆಯಬೇಕು. ಯಾವ ಸಮುದಾಯ ವಿದ್ಯೆಯಲ್ಲಿ, ಜ್ಞಾನದಲ್ಲಿ ಮುಂದುವರೆಯುತ್ತದೆಯೋ ಅವರು ಇಡೀ ಜಗತ್ತನ್ನು ಆಳುತ್ತಾರೆ. ಆದ್ದರಿಂದ ಶಿಕ್ಷಣ, ಉದ್ಯೋಗ, ಮತ್ತು ಸಬಲೀಕರಣದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡುತ್ತಿರುವುದು ಔಚಿತ್ಯಪೂರ್ಣವಾಗಿದೆ. ವಾಲ್ಮೀಕಿ ಸಮುದಾಯದವರಿಗೂ ಸೇರಿದಂತೆ ಎಸ್.ಸಿ/ ಎಸ್.ಟಿ / ಹಿಂದುಳಿದವರ ವಿದ್ಯಾರ್ಥಿನಿಲಯಗಳ ಪ್ರಾರಂಭಕ್ಕೆ ಮಂಜೂರಾತಿಯನ್ನು ಶಿಗ್ಗಾಂವಿ ತಾಲ್ಲೂಕಿಗೆ ನೀಡಲಾಗಿದೆ" ಎಂದರು.
ಆಧ್ಯಾತ್ಮ, ಸಮಾನತೆಯ ನಾಡು; "ಕನಕದಾಸರು, ಸಂತ ಶಿಶುನಾಳ ಶರೀಫರ ನಾಡಿನಲ್ಲಿ ಆಧ್ಯಾತ್ಮಿಕತೆ ಸಮಾನತೆಯ ಗುಣ ಇದೆ. ಒಗ್ಗಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ಕನಕದಾಸರು ಹೇಳಿದ ಕುಲಕುಲಕುಲವೆಂದು ಬಡಿದಾಡದಿರು, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ನುಡಿಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಮಾತಿನ ಅರ್ಥವನ್ನು ಗ್ರಹಿಸಿ ಬದುಕು ನಡೆಸುವ ಅವಶ್ಯಕತೆ ಇದೆ" ಎಂದು ಕರೆ ನೀಡಿದರು.
"ಶಿಗ್ಗಾಂವಿ ಹಾಗೂ ಸವಣೂರು ಅಭಿವೃದ್ಧಿಯೇ ನನ್ನ ಧ್ಯೇಯ. ಇದಕ್ಕೆ ಸದಾ ಕಂಕಣ ಬದ್ಧವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
"ಕುರುಬ ಸಮುದಾಯ ಕರಿಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕತೆಯ ಚಿನ್ಹೆ. ಅದು ನನಗೆ ಕವಚವಿದ್ದಂತೆ. ಅವರು ಪ್ರೀತಿಯಿಂದ ಕಾಣಿಕೆ ನೀಡಿರುವ ಆರೋಗ್ಯವಂತ ಕುರಿ ಜೀವಂತಿಕೆಯ ಸಂಕೇತ. ತನ್ನ ಉಣ್ಣೆಯನ್ನು ನೀಡಿ ಜನರನ್ನು ಚಳಿಗಾಲದಲ್ಲಿ ರಕ್ಷಿಸುತ್ತದೆ. ಪರೋಪಕಾರಿಯಾಗಿ ಬದುಕಬೇಕೆನ್ನುವ ಸಂದೇಶವನ್ನು ಅದು ಸಾರುತ್ತದೆ. ಗಂಜಿಗಟ್ಟಿ ಗ್ರಾಮದ ಜನರ ತ್ಯಾಗ ವ್ಯರ್ಥವಾಗುವುದಿಲ್ಲ. ಊರಿನ ಸಮಗ್ರ ಅಭಿವೃದ್ಧಿ ಮಾಡಿ, ಸಮಸ್ಯೆಗಳನ್ನು ನಿವಾರಿಸಿ, ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಲಾಗುತ್ತದೆ" ಎಂದರು.
ಎಥನಾಲ್ ಘಟಕ ಸ್ಥಾಪನೆ; "ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಸ್ಥಾಪನೆ, ಕಬ್ಬು, ಗೋವಿನ ಜೋಳ, ಭತ್ತ ಬೆಳೆಯುವ ರೈತರ ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಶಿಗ್ಗಾವಿ ತಾಲ್ಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಡಿಸ್ಟಲರಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರೈತರ ಉತ್ಪಾದಿಸುವ ಬೆಳೆಗಳು ಸಂಸ್ಕರಣೆ ನಂತರ ಮೌಲ್ಯ ವೃದ್ಧಿಯಾದಾಗ ಮಾತ್ರ ರೈತನಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಕೋಣನಕೆರೆಯಿಂದ ತಡಸವರೆಗೂ ಸುಮಾರು 15000 ಕಬ್ಬು ಬೆಳೆಯ ಪ್ರದೇಶ ನಿರ್ಮಾಣವಾಗಿದ್ದು, ರೈತರ ಕಬ್ಬು ಬೆಳೆಗೆ ಉತ್ತಮ ಬೆಲೆ ಸಿಕ್ಕು, ಅವರ ಬದುಕೂ ಕೂಡ ಆರ್ಥಿಕ ಸಬಲತೆ ಕಾಣಲು ವಿಐಎನ್ಪಿ ಸಕ್ಕರೆ ಕಾರ್ಖಾನೆಯಿಂದ ಸಹಕಾರ ನೀಡಲಿರುವ ಭರವಸೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
"ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆ, ಆರ್ಥಿಕ ಚಟುವಟಿಕೆ, ರೈತರ ಹಿತರಕ್ಷಣೆಯ ಗುರಿಯನ್ನಿರಿಸಿಕೊಂಡು ಎಥನಾಲ್ ನೀತಿಯನ್ನು ರೂಪಿಸಿದೆ. ಕರ್ನಾಟಕ ಎಥನಾಲ್ ಪಾಲಿಸಿಯಿಂದ ಹೆಚ್ಚಿನ ಲಾಭ ಪಡೆಯುವ ಹಾದಿಯಲ್ಲಿದ್ದು, ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ಘಟಕವನ್ನು ಸ್ಥಾಪಿಸಲಾಗಿದೆ. ಕಾರ್ಖಾನೆಯಲ್ಲಿ ಕಬ್ಬು, ಗೋವಿನ ಜೋಳ, ಭತ್ತದಿಂದಲೂ ಎಥನಾಲ್ ತಯಾರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ" ಎಂದರು.












Click it and Unblock the Notifications