ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ: ಸೂರಜ್ ರೇವಣ್ಣ ಬಂಧನ
ಹಾಸನ, ಜೂನ್ 23: ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಕುಟುಂಬಕ್ಕೆ ಮತ್ತೊಂದು ಅಘಾತವಾಗಿದೆ. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂಬಂಧ ಬಂಧಿಸಲಾಗಿದೆ.
ಹಾಸನದ ಹೊಳೆನರಸೀಪುರದ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಸಂಜೆ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಸಂಬಂಧ ವಿವರಣೆ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಠಾಣೆಗೆ ಆಗಮಿಸಿದ್ದರು. ಆಗ ಅವರ ವಿಚಾರಣೆ ನಡೆದಿತ್ತು. ಈಗ ಪೊಲೀಸರು ಬಂಧನದ ಕುರಿತು ಖಚಿತ ಮಾಹಿತಿ ನೀಡಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇಮಕಗೊಂಡಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆವರೆಗೂ ಅವರ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬಳಿಕ ಬಂಧಿಸಿದ್ದಾರೆ.
ಹಾಸನದ ಮಾಜಿ ಸಂಸದ, ಸೂರಜ್ ರೇವಣ್ಣ ಸಹೋದರ ಪ್ರಜ್ವಲ್ ರೇವಣ್ಣ ಈಗಾಗಲೇ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಅವರು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ. ಈಗ ಸೂರಜ್ ರೇವಣ್ಣ ಸಹ ಬಂಧನವಾಗಿದ್ದು, ರೇವಣ್ಣ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಪ್ರಕರಣ ಬೆಂಗಳೂರಿಗೆ ವರ್ಗ: ಭಾನುವಾರ ಮುಂಜಾನೆ 4 ಗಂಟೆವರೆಗೂ ಸೂರಜ್ ರೇವಣ್ಣ ವಿಚಾರಣೆಯನ್ನು ಠಾಣೆಯಲ್ಲಿ ನಡೆಸಿದ್ದ ತನಿಖಾಧಿಕಾರಿ ಬಳಿಕ ಹಾಸನ ನಗರದ ಸೆನ್ ಠಾಣೆಯಲ್ಲೇ ಸೂರಜ್ ಮಲಗಲು ವ್ಯವಸ್ಥೆ ಮಾಡಿದ್ದರು. ಭಾನುವಾರ ಅವರ ವಿಚಾರಣೆ ಮುಂದುವರೆಯಲಿದೆ. ಅದಕ್ಕೂ ಮೊದಲು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ದೌರ್ಜನ್ಯ ದೂರು ನೀಡಿರುವ ಯುವಕನ ವಿರುದ್ಧ ಎಂಎಲ್‌ಸಿ ಸೂರಜ್ ರೇವಣ್ಣ ಆಪ್ತ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ದೂರು ನೀಡಿದ್ದಾರೆ. ಶನಿವಾರ ಬಂಧನದ ಸೂಚನೆ ಇಲ್ಲದೇ ಕೇಸ್ ಬಗ್ಗೆ ವಿವರಣೆ ನೀಡಲು ಸೂರಜ್ ರೇವಣ್ಣ ಠಾಣೆಗೆ ಆಗಮಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಬಂಧಿಸಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ದೂರು ನೀಡಿರುವ ಸಂತ್ರಸ್ತ ಯುವಕನಿಗೆ ಭಾನುವಾರ ವೈದ್ಯಕೀಯ ಪರೀಕ್ಷೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯುವ ನಿರೀಕ್ಷೆ ಇದೆ. ಸೂರಜ್ ವಿರುದ್ಧ ಜಾಮೀನು ರಹಿತ ಸೆಕ್ಷೆನ್‌ಗಳಡಿ ಕೇಸುಗಳು ದಾಖಲಾಗಿರುವ ಕಾರಣ ಬಂಧಿಸುವ ಸಾಧ್ಯತೆ ಇದೆ ಎಂದು ಶನಿವಾರವೇ ತಿಳಿದಿತ್ತು.
ಸದ್ಯ ಹಾಸನದ ಸೈಬರ್ ಕ್ರೈಮ್ ಠಾಣೆಯಲ್ಲಿ ಸೂರಜ್ ರೇವಣ್ಣ ಇದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿ ಮತ್ತೆ ತಮ್ಮ ವಶಕ್ಕೆ ಪಡೆಯಲಿದ್ದಾರೆ. ಭಾನುವಾರ ಕೋರ್ಟ್ ರಜೆ ಇರುವ ಕಾರಣ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಿ ಹಾಜರುಪಡಿಸಲಿದ್ದಾರೆ.
ಸೂರಜ್ ರೇವಣ್ಣ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಅವರ ವಿರುದ್ಧದ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆ ಅಗುವ ನಿರೀಕ್ಷೆ ಇದ್ದು, ಈ ಕುರಿತು ಪೊಲೀಸರು ಕಾನೂನು ತಜ್ಞರ ಜೊತೆ ಚರ್ಚೆ ನೆಸಿದ್ದಾರೆ. ಪ್ರಕರಣ ವರ್ಗಾವಣೆ ಆದರೆ ಸೂರಜ್ ರೇವಣ್ಣರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.












Click it and Unblock the Notifications