ಹಾಸನಾಂಬೆ ದೇಗುಲದಲ್ಲಿ ಪುಂಡ-ಪೋಕರಿಗಳಿಗೆ ಸನ್ಮಾನ! ಜಿಲ್ಲಾಡಳಿತದ ವಿರುದ್ಧ ಆರೋಪ
ಹಾಸನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಇನ್ನು ಪ್ರತಿ ವರ್ಷದಂತೆ ಈ ಬಾರಿಯೂ ಹಾಸನಾಂಬೆಯ ದರ್ಶನಕ್ಕೆ ಭಾರಿ ಭಕ್ತಸಾಗರ ಹರಿದುಬಂದಿತ್ತು. ಅಲ್ಲದೆ ಈ ಬಾರಿ ಈ ದೇಗುಲದಲ್ಲಿ ವಿಐಪಿ ಸಂಸ್ಕೃತಿ ಹೆಚ್ಚಾಗಿತ್ತು ಎಂದು ಹಲವರು ಆರೋಪಗಳನ್ನು ಮಾಡಿದ್ದಾರೆ.
ಅಲ್ಲದೇ ದೇವಸ್ಥಾನದಲ್ಲಿ ಯಾರೇ ಪುಂಡ, ಪೋಕರಿಗಳು ಬಂದರೂ ದೇವಾಲಯದ ಹಣದಲ್ಲಿ ಅವರಿಗೆ ಅದ್ಧೂರಿ ಸನ್ಮಾನ ಮಾಡಲಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೇವಣ್ಣ ಕುಟುಂಬದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದ ಜಿ.ದೇವರಾಜೇಗೌಡ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಹಾಸನ ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.

ಹಾಸನಾಂಬೆ ದೇವಿಯ ಹಣದಲ್ಲಿ ಯಾವುದೇ ಪರೋಡಿ, ಪೋಕರಿಗಳು ಬಂದ್ರೂ ಅವರನ್ನು ವಿಐಪಿ ಎಂದು ಸುಮಾರು 10 ಸಾವಿರ ರೂಪಾಯಿ ಶಾಲು ಹೊದಿಸಿ, ಸನ್ಮಾನ ಮಾಡಿದ್ದಾರೆ. ಹಾಸನಾಂಬೆ ತಾಯಿಯೇ ಎಲ್ಲರಿಗಿಂತ ಹಿರಿಯಳು. ಅವರಿಗಿಂತ ಇವರು ದೊಡ್ಡವರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ತೆರೆಬಿದ್ದಿದೆ. ಅಶ್ವೀಜ ಮಾಸದಲ್ಲಿ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಬಲಿಪಾಡ್ಯಮಿಯ ಮರುದಿನ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ. ಈ ಬಾರಿ ಲಕ್ಷಾಂತರ ಮಂದಿ ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳು ಕೂಡ ತಾಯಿಯ ದರ್ಶನ ಪಡೆದಿದ್ದಾರೆ.

ಈ ಬಾರಿ ಹಾಸನ ಜಿಲ್ಲಾಡಳಿತದ ವಿರುದ್ಧ ಭಕ್ತಾದಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಐಪಿಗಳ ಹೆಸರಿನಲ್ಲಿ ಯಾರ್ಯಾರೋ ಬಂದು ಸುಲಭವಾಗಿ ದೇಗುಲ ಪ್ರವೇಶಕ್ಕೆ ಅನುವು ಪಡೆಯುತ್ತಾರೆ. ನಾವೆಲ್ಲ ಕ್ಯೂ ನಿಂತು ಒದ್ದಾಡಬೇಕು ಎಂದು ಹರಿಹಾಯ್ದಿದ್ದರು. ಅಲ್ಲದೆ ವಿಐಪಿಗಳಿಗಾಗಿ ದೇವಾಲಯ ತೆರೆಯಲಾಗಿದೆಯೇ? ಎಂದೆಲ್ಲ ಪ್ರಶ್ನೆಗಳನ್ನು ಕೇಳಿದ್ದರು.
ದಾಖಲೆ ಆದಾಯ: ಅಕ್ಟೋಬರ್ 24ರ ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಓಪನ್ ಆಗಿತ್ತು. ಅಕ್ಟೋಬರ್ 25ರಿಂದ ನವೆಂಬರ್ 3ರ (ಇಂದು) ಮುಂಜಾನೆ 6 ಗಂಟೆಯವರೆಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಎಸ್ಪಿ ಮೊಹಮ್ಮದ್ ಸುಜಿತಾ ಸೇರಿದಂತೆ ಹಲವರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.
ಒಂಬತ್ತು ದಿನಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಮಂದಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ಹಾಸನಾಂಬ ದೇವಸ್ಥಾನಕ್ಕೆ 9 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ ಎಂದು ವರದಿಯಾಗಿದೆ. ಇನ್ನು ಇಂದಿನಿಂದ ಒಂದು ವರ್ಷಗಳ ಕಾಲ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಮುಂದಿನ ವರ್ಷ ಅಕ್ಟೋಬರ್ 9ರಿಂದ ಅಕ್ಟೋಬರ್ 23ರವರೆಗೆ ಹಾಸನಾಂಬೆಯ ದರ್ಶನ ಸಿಗಲಿದೆ.












Click it and Unblock the Notifications