ಹಾಸನ: ಅನುಮತಿ ಪಡೆಯದೆ ನಿರ್ಮಿಸಿದ್ದ ರಾಯಣ್ಣ ಚೌಕಿ ತೆರವು
ಹಾಸನ, ಡಿಸೆಂಬರ್ 19: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೆ ಸಂಗೊಳ್ಳಿ ರಾಯಣ್ಣ ಚೌಕಿಯನ್ನು ನಿರ್ಮಿಸಿದ್ದರಿಂದ ಜಿಲ್ಲಾಡಳಿತ ಭಾನುವಾರ ಪೊಲೀಸ್ ಸರ್ಪಗಾವಲಿನಲ್ಲಿ ರಾಯಣ್ಣ ಚೌಕಿಯನ್ನು ತೆರವುಗೊಳಿಸಿದೆ.
ರಾಯಣ್ಣ ಚೌಕಿ ತೆರವು ಮಾಡುವ ಮುನ್ನ ಕಾಗಿನೆಲೆ ಪೀಠದ ಮೈಸೂರು ಶಾಖಾ ಮಠದ ಸ್ವಾಮೀಜಿ ರಾಯಣ್ಣ ಚೌಕಿಗೆ ಪೂಜೆ ನೆರವೇರಿಸಿದರು. ಬಳಿಕ ಜಿಲ್ಲಾಡಳಿತದಿಂದ ಗೌರವ ವಂದನೆ ಸಲ್ಲಿಸಿ ಚೌಕಿಯನ್ನು ತೆರವುಗೊಳಿಸಲಾಯಿತು.
ಚೌಕಿ ತೆರವುಗೊಳಿಸುತ್ತಿದ್ದಂತೆ ಆಕ್ರೋಶಗೊಂಡ ರಾಯಣ್ಣ ಅಭಿಮಾನಿಗಳು, ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಖಾಸಗಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾದರು. ಇಡೀ ದಿನ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅನುಮತಿಯನ್ನು ಪಡೆಯದೆ ರಾಯಣ್ಣ ಚೌಕಿ ನಿರ್ಮಾಣ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದ ಹೃದಯ ಭಾಗದ ರಸ್ತೆ ಮಧ್ಯೆಯಲ್ಲಿ ಕಳೆದ ಹತ್ತು ದಿನದ ಹಿಂದೆ ರಾತ್ರೋರಾತ್ರಿ ಗ್ರಾಮದ ಯುವಕ ಗುಂಪು ಯಾವುದೇ ಅನುಮತಿಯನ್ನು ಪಡೆಯದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವಿರುವ ಚೌಕಿಯನ್ನು ನಿರ್ಮಾಣ ಮಾಡಿದ್ದರು. ಬಳಿಕ ಗ್ರಾಮದ ಬೇರೆ ಸಮುದಾಯದವರು ಹಾಗೂ ಅಭಿಮಾನಿಗಳು ನಮ್ಮ ನಾಯಕರ ಫೋಟೋಗಳುಳ್ಳ ಚೌಕಿಯನ್ನು ಹಾಕುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್ ಭದ್ರತೆಯಲ್ಲಿ ರಾಯಣ್ಣ ಚೌಕಿ ತೆರವು
ಈ ಬಗ್ಗೆ ತಾಲೂಕು ಆಡಳಿತ ಹಾಗೂ ಪೊಲೀಸರು ಸಾಕಷ್ಟು ಶಾಂತಿ ಸಭೆಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ರಾಯಣ್ಣ ಚೌಕಿಯನ್ನು ಭಾನುವಾರ ತೆರವು ಮಾಡಿದೆ. ರಾಯಣ್ಣ ಚೌಕಿ ನಿರ್ಮಾಣ ಮಾಡಿರುವ ಸ್ಥಳ ಹಾಗೂ ಗ್ರಾಮದ ಸುತ್ತಮುತ್ತಲೂ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಿ, ಅಕ್ಕಪಕ್ಕದ ಊರುಗಳಿಂದ ಯಾರೂ ಬರದಂತೆ ಚೆಕ್ ಪೋಸ್ಟ್ ಮಾಡಿ ತೆರವು ಮಾಡಲಾಯಿತು.
ಬೆಳಗ್ಗೆ 5 ಗಂಟೆಯಿಂದಲೇ ಗ್ರಾಮದ ಸುತ್ತ ಪೊಲೀಸ್ ಭದ್ರತೆ ನೀಡಲಾಗಿತ್ತು. ಎಸ್ಪಿ ಹರಿರಾಂ ಶಂಕರ್ ಕೂಡಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಹಾಸನ ಎಸಿ, ಹೊಳೆನರಸೀಪುರ ತಹಶೀಲ್ದಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದರು. ರಾಯಣ್ಣ ಭಾವಚಿತ್ರವಿರುವ ಚೌಕಿ ತೆರವಿಗೂ ಮುನ್ನ ಜಿಲ್ಲಾಡಳಿತದಿಂದ ಗೌರವ ವಂದನೆ ಸಲ್ಲಿಸಲಾಯಿತು. ಜೊತೆಗೆ ಕಾಗಿನೆಲೆ ಪೀಠದ ಮೈಸೂರು ಶಾಖಾ ಮಠದ ಡಾ.ಶಿವಪುರಿ ಶಿವಾನಂದ ಸ್ವಾಮೀಜಿ ಸ್ಥಳಕ್ಕೆ ಆಗಮಿಸಿ ಪೂಜೆ ನೆರವೇರಿಸಿದರು.

ಎಲ್ಲರೂ ಶಾಂತಿಯುತವಾಗಿ ಬಾಳಲಿ ಎನ್ನುವುದು ನಮ್ಮ ಆಶಯ
ಪೂಜೆ ಬಳಿಕ ಮಾತನಾಡಿದ ಸ್ವಾಮೀಜಿ, "ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತ, ಅವರಿಗೆ ಅವಮಾನ ಆಗಬಾರದು. ಇದನ್ನು ತೆರವುಗೊಳಿಸುವ ಅನಿವಾರ್ಯತೆ ಇರುವುದರಿಂದ ಎಲ್ಲರಿಗೂ ಮನವರಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಲಾಗುತ್ತಿದೆ. ಈ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡಬೇಕೆಂದು ನಾವೆಲ್ಲ ನಿರ್ಧರಿಸಿದ್ದೇವೆ. ಜಿಲ್ಲಾಡಳಿತ, ಪೊಲೀಸರ ಮನವಿ ಮೇರೆಗೆ ಚೌಕಿ ತೆರವು ಮಾಡಲು ಒಪ್ಪಿಕೊಂಡಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಬಾಳಲಿ ಎನ್ನುವುದು ನಮ್ಮ ಆಶಯ ಎಂದರು.

ಖಾಸಗಿ ಜಾಗದಲ್ಲಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಸಜ್ಜು
ರಾಯಣ್ಣ ಚೌಕಿ ತೆರವು ಮಾಡುತ್ತಿದ್ದಂತೆ ಅಭಿಮಾನಿಗಳು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವಿರುದ್ದ ಆಕ್ರೋಶ ಹೊರಹಾಕಿದರು. ಅಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಮತ್ತೊಂದು ಜಾಗದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಮುಂದಾದರು. ರಸ್ತೆಯ ಪಕ್ಕದಲ್ಲಿಯೇ ಇದ್ದ ಖಾಸಗಿಯವರ ಜಾಗದಲ್ಲಿ ಎಂಟು ಅಡಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡರು. ಜನವರಿ 26ರೊಳಗೆ ಖಾಸಗಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಿಯೇ ತೀರುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದರೂ, ಶ್ರವಣೂರು ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications