ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖ್ಯಾತ ಲೇಖಕ, ಚಿಂತಕ ಪ್ರೊ.ಬಿ. ಗಂಗಾಧರಮೂರ್ತಿ ವಿಧಿವಶ

|
Google Oneindia Kannada News

ಹಾಸನ, ಸೆಪ್ಟೆಂಬರ್ 10: ಖ್ಯಾತ ಲೇಖಕ, ಚಿಂತಕ ಪ್ರೊ.ಬಿ. ಗಂಗಾಧರಮೂರ್ತಿ(77) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಗಂಗಾಧರಮೂರ್ತಿ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಸಂಖ್ಯಾತ ಶಿಷ್ಯರನ್ನು ಅಗಲಿದ್ದಾರೆ.

ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿಯಂಥ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳಲ್ಲಿ ಇವರು ಭಾಗವಾಗಿದ್ದರು. ಸಂಸ್ಕೃತಿ ಚಿಂತಕರಾಗಿ, ಬರಹಗಾರರಾಗಿ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಟೀಚರ್ ಮಾಸಪತ್ರಿಕೆಗೆ ದಶಕಕ್ಕೂ ಹೆಚ್ಚು ಕಾಲದಿಂದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರೊ.ಬಿ.ಗಂಗಾಧರ ಮೂರ್ತಿಯವರು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕವನ್ನು ರೂಪಿಸಿದ್ದು ಮಹತ್ವದ ಕೆಲಸವಾಗಿದೆ. 1938ರ ಧ್ವಜ ಸತ್ಯಾಗ್ರಹದ ಹತ್ಯಾಕಾಂಡದ ನಂತರ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣವನ್ನು ಅಪಾರ ಶ್ರಮ ಹಾಗೂ ಬದ್ಧತೆಯಿಂದ ವಿಶಿಷ್ಟವಾಗಿ ರೂಪಿಸಿ, ವಿನ್ಯಾಸಗೊಳಿಸಿದರು.

Renowned author, thinker Prof B Gangadharamurthy died of heart attack

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ಮತ್ತು ಥೀಮ್ ಗ್ರಂಥಾಲಯ ರೂಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಲವು ಮುಖಗಳನ್ನು ಅನಾವರಣಗೊಳಿಸುವ ಆ ಸ್ಮಾರಕ ದೇಶದಲ್ಲೇ ಅಪರೂಪದ ಸ್ಮಾರಕವಾಗಿ ಖ್ಯಾತಿ ಪಡೆದಿದೆ. ಗೌರಿಬಿದನೂರಿನ ಹೊಸ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿ ಅಂಬೇಡ್ಕರ್ ನೆನಪಿನಲ್ಲಿ 'ಸಮಾನತಾ ಸೌಧ'ವನ್ನು ರೂಪಿಸಿದ್ದು ಅವರ ಮತ್ತೊಂದು ಅವಿಸ್ಮರಣೀಯ ಕೆಲಸವಾಗಿದೆ.

ಸಾಮಾಜಿಕ ಸಮಾನತೆಗಾಗಿ ದುಡಿಯುವ, ಮಿಡಿಯುವ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಸ್ಥಳ ಅದು. ವಿದ್ಯಾರ್ಥಿಗಳಿಗೆ ಪ್ರೀತಿಯ ಮೇಷ್ಟ್ರಾಗಿದ್ದ ಅವರು ಅತ್ಯಂತ ಜನಪ್ರಿಯ ಅಧ್ಯಾಪಕರಾಗಿದ್ದರು.

ಲೇಖಕರಾಗಿಯೂ ಗಂಗಾಧರಮೂರ್ತಿ ಮಹತ್ವದ ಕೆಲಸ ಮಾಡಿದ್ದಾರೆ. ಹೂ ಅರಳುವಂಥ ಮಣ್ಣು (ಕವನ ಸಂಕಲನ), ನಾಗಸಂದ್ರ ಭೂ ಆಕ್ರಮಣ ಚಳವಳಿ, ಭಾರತದ ಬೌದ್ಧಿಕ ದಾರಿದ್ರ್ಯ (ಅನುವಾದ), ಭಾರತೀಯ ಸಮಾಜದ ಜಾತಿ ಲಕ್ಷಣ (ಅನುವಾದ), ಅಂಬೇಡ್ಕರ್ ಮತ್ತು ಮುಸ್ಲಿಮರು (ಅನುವಾದ), ವಸಾಹತುಪೂರ್ವ ಕಾಲದ ಜಾತಿಹೋರಾಟಗಳು, ಹಿಂದುತ್ವ ಮತ್ತು ದಲಿತರು, ಸೂಫಿ ಕಥಾಲೋಕ, ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನೇತರ ಹೋರಾಟಗಳು ಮುಂತಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

English summary
Renowned author, thinker Prof B Gangadharamurthy died of heart attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X