ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಪ್ರೀಂ ತೀರ್ಪು: ಹಾಸನದಲ್ಲಿ ಕರವೇ, ಬಿಜೆಪಿ, ಜೆಡಿಎಸ್ ಪ್ರತಿಭಟನೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಸೆಪ್ಟೆಂಬರ್ 7: ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಹಾಸನದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕರವೇ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಹೇಮಾವತಿ ಪ್ರತಿಮೆ ಬಳಿ ಬುಧವಾರ ಜಮಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿದರು. ತಮಿಳು ಭಾಷೆಯ ಪತ್ರಿಕೆಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.[ಹೇಮಾವತಿ ಜಲಾಶಯಕ್ಕೆ ಮುತ್ತಿಗೆ: ಕರವೇಯ ನೂರಾರು ಕಾರ್ಯಕರ್ತರ ಬಂಧನ]

Protest by bjp, jds, karave in Hassan

ಮುಂಗಾರು ಮುನಿಸಿಕೊಂಡು ಅಣೆಕಟ್ಟೆಗಳು ಭಣಗುಡುತ್ತಿದೆ. ಇಂತಹ ವೇಳೆ ತಮಿಳುನಾಡಿಗೆ ನೀರು ಬಿಟ್ಟರೆ ಇಲ್ಲಿನ ಜನತೆ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿ ವರ್ಷ ಕರ್ನಾಟಕ ರಾಜ್ಯಕ್ಕೆ ತಮಿಳುನಾಡಿನಿಂದ ಅನ್ಯಾಯವಾಗುತ್ತಿದ್ದರೂ ಇದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಸರ್ಕಾರ ಎಡವಿದೆ ಎಂದು ದೂರಿದರು.

ಈಗಾಗಲೇ ಏಕಾಏಕಿ ಹೇಮಾವತಿ ನೀರನ್ನು ಬಿಡಲಾಗುತ್ತಿದೆ. ಹೀಗೆ ಮುಂದುವರೆದರೆ ಕೆಲ ದಿನಗಳಲ್ಲೇ ನೀರಿಗೆ ಪರಿತಪಿಸುವಂತಾಗುತ್ತದೆ ಎಂದು ಹೇಳಿದರು. ನಂತರ ಎವಿಕೆ ಕಾಲೇಜು ಬಳಿ ಇರುವ ತಮಿಳುನಾಡು ಬ್ಯಾಂಕ್ ಬಳಿ ತೆರಳಿ. ಬಂದ್ ಮಾಡಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.[ತಮಿಳುನಾಡಿಗೆ ನೀರು: ಹಾಸನದಲ್ಲಿ ಕರವೇಯಿಂದ ಪ್ರತಿಭಟನೆ]

ಬಿಜೆಪಿಯಿಂದ ರಸ್ತೆ ತಡೆ: ರೈತರ ಹಾಗೂ ಜನರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆ ಮಾಡಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.

Protest by bjp, jds, karave in Hassan

ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹೊರಟಿತು. ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲ ಸಮಯ ರಸ್ತೆ ತಡೆ ಮಾಡಿದರು. ನಂತರ ಬಿ.ಎಂ.ರಸ್ತೆ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಎರಡು ಕಡೆ ರಸ್ತೆಯಲ್ಲಿ ಕುಳಿತು, ಘೋಷಣೆ ಕೂಗುವ ಮೂಲಕ ರಸ್ತೆ ತಡೆ ಮಾಡಿದರು.

ಆ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ, ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸೂಕ್ತ ದಾಖಲೆಗಳೊಂದಿಗೆ ವಾದ ಮಂಡಿಸಲು ವಿಫಲವಾಗಿದೆ. ಅ ಮೂಲಕ ರೈತರಿಗೆ ಅನ್ಯಾಯ ಎಸಗಿದೆ ಎಂದು ದೂರಿದರು. ಇಂದಿನ ಒಳ ಹರಿವು 1277 ಕ್ಯೂಸೆಕ್ ಇದ್ದು, 10 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳ ಮೂಲಕ ಬಿಡಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನು 10 ದಿನಗಳಲ್ಲಿ ಜಲಾಶಯ ಬರಿದಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.[ಹಾಸನ- ಮಾರನಹಳ್ಳಿ ರಸ್ತೆ ವಿಸ್ತರಣೆಗೆ 3 ಸಾವಿರ ಮರಕ್ಕೆ ಕೊಡಲಿ]

Protest by bjp, jds, karave in Hassan

ಜಿಲ್ಲೆಯಲ್ಲಿ 1 ಲಕ್ಷದ 61 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶ ಹೇಮಾವತಿ ಜಲಾಶಯ ವ್ಯಾಪ್ತಿಗೆ ಬರುತ್ತದೆ. ಭತ್ತ, ಕಬ್ಬು ಇತರೆ ಬೆಳೆಗಳು ಒಣಗಿ ನಷ್ಟವಾಗಿದೆ. ಜೊತೆಗೆ ಹೇಮಾವತಿಯಿಂದ ಹೊಳೆನರಸೀಪುರ, ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ನಗರಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದೆ. ಇದು ತಿಳಿದಿದ್ದರೂ ಸೂಕ್ತ ಸಮಯದಲ್ಲಿ ಜಲಾನಯನ ಸಮಿತಿ ಸಭೆ ಕರೆದು, ವಸ್ತು ಸ್ಥಿತಿ ಅವಲೋಕನ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಜೆಡಿಎಸ್ ಬೃಹತ್ ಧರಣಿ: ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಇದ್ದರೂ ಸರ್ಕಾರಕ್ಕೆ ವರದಿ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಜೆಡಿಎಸ್ ಶಾಸಕರು ಡಿಸಿ ಕಚೇರಿ ಮುಂದೆ ಧರಣಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ನಿಷ್ಕ್ರಿಯಗೊಂಡಿದ್ದು ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ನೀರನ್ನು ಸರ್ಮಪಕ ನಿರ್ವಹಣೆ ಮಾಡುವಲ್ಲಿಯೂ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಇಲಾಖೆ ವಿಫಲವಾಗಿದೆ ಎಂದು ದೂರಿದರು. ಹೇಮಾವತಿ ಜಲಾಶಯದಿಂದ ನೀರನ್ನು ಬೇರೆಡೆಗೆ ಹರಿಸುವ ಮೂಲಕ ಜಿಲ್ಲೆ ರೈತರಿಗೆ ದ್ರೋಹ ಮಾಡಿದೆ ಎಂದರು.[ಹಾಸನದಲ್ಲಿ ಮಾರುತಿ ವ್ಯಾನ್ ಗೆ ಆಕಸ್ಮಿಕ ಬೆಂಕಿ: ಭಸ್ಮ]

ಮಳೆ ಪ್ರಮಾಣ ಕಡಿಮೆ: ಪ್ರಸ್ತುತ ವರ್ಷ ಅತಿ ಕಡಿಮೆ ಮಳೆಯಾಗಿದ್ದು, ಬರದ ಛಾಯೆ ಆವರಿಸಿದೆ. ನೀರಿನ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಅತಿ ಕಡಿಮೆ ಆಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಸಮರ್ಪಕ ಅಂಕಿ- ಅಂಶ ಒದಗಿಸದೆ ಇಂತಹ ತೀರ್ಪು ಬರುವುದಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು

ಕ್ಷೇತ್ರದ ಶಾಸಕರಾದ ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಪ್ರಜ್ವಲ್ ರೇವಣ್ಣ, ಮುಖಂಡರಾದ ಬಿ.ಆರ್. ಸತ್ಯನಾರಾಯಣ್, ಕೆ.ಎಂ.ರಾಜೇಗೌಡ. ಜಿ.ಪಂ. ಸದಸ್ಯ ಸ್ವರೂಪ್, ಬೇಲೂರು ಪುರಸಭೆ ಅಧ್ಯಕ್ಷ ಶ್ರೀನಿಧಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಅಕ್ಬರ್ ಇತರರು ಪಾಲ್ಗೊಂಡಿದ್ದರು.

English summary
After the direction by supreme court to Karnataka state government to release cauvery water to Tamilnadu government, protest by BJP, JDS, KARAVE in Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X