IPS: ಹಾಸನದಲ್ಲಿ ರಸ್ತೆ ಅಪಘಾತ, ಐಪಿಎಸ್ ಅಧಿಕಾರಿ ಸಾವು, ಸಿಎಂ ಸಂತಾಪ
ಹಾಸನ, ಡಿಸೆಂಬರ್ 02: ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಸಾವನ್ನಪ್ಪಿದ್ದಾರೆ. ಹೊಳೆನರಸೀಪುರದ ಪ್ರೊಬೇಷನರಿ ಡಿವೈಎಸ್‌ಪಿಯಾಗಿ ರಿಪೋರ್ಟ್ ಮಾಡಿಕೊಳ್ಳಲು ಆಗಮಿಸುತ್ತಿದ್ದ ವೇಳೆ ಭಾನುವಾರ ಸಂಜೆ ಈ ಅಪಘಾತ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಹರ್ಷಬರ್ಧನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹರ್ಷಬರ್ಧನ್ (26) ಪೊಲೀಸ್ ಜೀಪ್ KA-13, G-1386 ಮೂಲಕ ಆಗಮಿಸುತ್ತಿದ್ದರು. ಮಂಜೇಗೌಡ ಜೀಪ್ ಚಾಲಕರು. ಹಾಸನ ತಾಲೂಕಿನ ಕಿತ್ತಾನೆ ಗಡಿ ಬಳಿ ಜೀಪ್ ಟೈರ್ ಸಿಡಿದ ಪರಿಣಾಮ ನಿಯಂತ್ರಣ ತಪ್ಪಿದ ಜೀಪ್, ರಸ್ತೆ ಬದಿಯ ಮನೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಹರ್ಷಬರ್ಧನ್ ಮತ್ತು ಮಂಜೇಗೌಡರನ್ನು ಸ್ಥಳೀಯರು ರಕ್ಷಣೆ ಮಾಡಿ, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಸುಮಾರು ನಾಲ್ಕು ಗಂಟೆಗಳ ಕಾಲದ ಚಿಕಿತ್ಸೆ ಫಲ ನೀಡಿಲ್ಲ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರ್ಷಬರ್ಧನ್ ಮೃತಪಟ್ಟಿದ್ದಾರೆ. ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಮೂಲತಃ ಬಿಹಾರ ಮೂಲದವರು. ಇವರ ತಂದೆ ಮಧ್ಯಪ್ರದೇಶದಲ್ಲಿ ಎಡಿಸಿ ಆಗಿದ್ದಾರೆ. ಹರ್ಷಬರ್ಧನ್ 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 153ನೇ ರ‍್ಯಾಂಕ್ ಪಡೆದಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ್ದರು.
ವೈದ್ಯರ ಮಾಹಿತಿ: ಹರ್ಷಬರ್ಧನ್ ಸಾವಿನ ಕುರಿತು ಹಾಸನದ ಖಾಸಗಿ ಆಸ್ಪತ್ರೆಯ ಮುಖ್ಯಸ್ಥ ಡಾ. ಬಸಿರ್ ಪ್ರತಿಕ್ರಿಯೆ ನೀಡಿದ್ದು, "ಅಪಘಾತದ ಬಳಿಕ ಹರ್ಷಬರ್ಧನ್ ಹಾಗೂ ಮಂಜೇಗೌಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹರ್ಷಬರ್ಧನ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಮೆದುಳಿನಲ್ಲಿ ತೀವ್ರ ಸ್ವರೂಪದ ರಕ್ತಸ್ರಾವವಾಗಿತ್ತು. ಬೇರೆ ಆಸ್ಪತ್ರೆಯ ವೈದ್ಯರು ಸಹ ಆಗಮಿಸಿ ಚಿಕಿತ್ಸೆಯ ಉಸ್ತುವಾರಿ ನೋಡಿಕೊಂಡರು. ರಾಜ್ಯದ ಪ್ರಮುಖ ಆಸ್ಪತ್ರೆಯ ವೈದ್ಯರು ಚಿಕಿತ್ಸೆಗೆ ಮಾರ್ಗದರ್ಶನ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದರ ಹರ್ಷಬರ್ಧನ್ ಮೃತಪಟ್ಟಿದ್ದಾರೆ" ಎಂದು ಹೇಳಿದ್ದಾರೆ.
ಹರ್ಷಬರ್ಧನ್ ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ 4 ವಾರದ ತರಬೇತಿಯನ್ನು ಪೂರ್ಣಗೊಳಿಸಿದ್ದರು. ಆರು ತಿಂಗಳ ಕಾಲ ಅವರು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು. ಇದಕ್ಕಾಗಿ ಹೊಳೆನರಸೀಪುರದಲ್ಲಿ ಅವರು ಇಲಾಖಾ ತರಬೇತಿಗೆ ವರದಿ ಮಾಡಿಕೊಳ್ಳಲು ಆಗಮಿಸುತ್ತಿದ್ದಾಗ ಈ ಅಪಘಾತ ನಡೆದಿದೆ.
ಹರ್ಷಬರ್ಧನ್ ತಂದೆ ಸಹ ಸರ್ಕಾರಿ ಸೇವೆಯಲ್ಲಿದ್ದಾರೆ. ಹರ್ಷಬರ್ಧನ್ ಬಿಇ ಸಿವಿಲ್ ಇಂಜಿನಿಯರಿಂಗ್ ಓದಿದ್ದರು. ಐಪಿಎಸ್ ಪರೀಕ್ಷೆ ಪಾಸು ಮಾಡಿದ್ದರು. ಆದರೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಮೊದಲೇ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಈ ಅಪಘಾತದ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀಪು ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಚಾಲಕ ಮಂಜೇಗೌಡ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ. ಹರ್ಷಬರ್ಧನ್ ಅವರನ್ನು ಹಾಸನದಿಂದ ಪೊಲೀಸ್ ವಾಹನದಲ್ಲಿ ಚಾಲಕ ಮಂಜೇಗೌಡ ಕರೆದುಕೊಂಡು ಬರುತ್ತಿದ್ದರು.
ಮುಖ್ಯಮಂತ್ರಿಗಳ ಸಂತಾಪ: ಹರ್ಷಬರ್ಧನ್ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಶೋಕ ಸಂದೇಶದಲ್ಲಿ ಅವರು, 'ಹಾಸನ-ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು' ಎಂದು ಹೇಳಿದ್ದಾರೆ.
'ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications