ಡಿ. 14ರಂದು ವಿವಿಧೆಡೆ 100, ಹಾಸನದಲ್ಲಿ 5 ನಮ್ಮ ಕ್ಲಿನಿಕ್ ಆರಂಭ; ಸುಧಾಕರ್
ಹಾಸನ, ನವೆಂಬರ್ 30, ನಗರ ಪ್ರದೇಶಗಳಲ್ಲಿ ಒಟ್ಟು 100 'ನಮ್ಮ ಕ್ಲಿನಿಕ್'ಗಳು ಡಿಸೆಂಬರ್ 14 ರಂದು ಉದ್ಘಾಟನೆಗೊಳ್ಳಲಿವೆ. ಅದೇ ರೀತಿ ಹಾಸನ ಜಿಲ್ಲೆಯಲ್ಲಿ 5 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬುಧವಾರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರ ಪ್ರದೇಶಗಳಲ್ಲಿ ಜನಸಂಖ್ಯೆಗನುಗುಣವಾಗಿ ಆರೋಗ್ಯ ಕೇಂದ್ರಗಳಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ 438 'ನಮ್ಮ ಕ್ಲಿನಿಕ್'ಗಳನ್ನು ಆರಂಭಿಸಲಾಗುತ್ತಿದೆ. ಆ ಪೈಕಿ ಡಿಸೆಂಬರ್ 14 ರಂದು 100 ಕ್ಲಿನಿಕ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಅದರಂತೆ ಹಾಸನದಲ್ಲಿ ಐದು ಕ್ಲಿನಿಕ್ ಕಾರ್ಯಾರಂಭಗೊಳ್ಳಲಿವೆ.
ಭೂಮಿ ಹಸ್ತಾಂತರಿಸಿ, ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ: ಬೊಮ್ಮಾಯಿ
ಕೋವಿಡ್ ಬಂದ ಸಂದರ್ಭದಲ್ಲಿ ಸುಮಾರು 72 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇತ್ತು. 70 ಕ್ಕೂ ಅಧಿಕ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಭರ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಮಾರ್ಚ್ ವೇಳೆಗೆ ಉದ್ಘಾಟನೆಯಾಗಲಿದೆ.
ಒಟ್ಟು 339 ವೈದ್ಯ ಹುದ್ದೆಗಳ ಪೈಕಿ 269 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 123 ತಜ್ಞರ ಪೈಕಿ 105 ಭರ್ತಿಯಾಗಿದೆ. 23 ದಂತ ವೈದ್ಯರ ಹುದ್ದೆ ತುಂಬಿದೆ. 135 ಎಂಬಿಬಿಎಸ್ ವೈದ್ಯರ ಪೈಕಿ 115 ತುಂಬಿದೆ, ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆಯಲ್ಲಿ 25 ಖಾಲಿ ಇದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕ್ಯಾನ್ಸರ್, ಮಧುಮೇಹ ಮೊದಲಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲು ಮಾಡಲು ಕ್ರಮ ವಹಿಸಲಾಗಿದೆ. ಹಾಸನದಲ್ಲಿ ಶೇ.60ರಷ್ಟು ತಪಾಸಣೆ ನಡೆದಿದೆ ಎಂದು ತಿಳಿಸಿದರು.

1.10 ಕೋಟಿ ಆಯುಷ್ಮಾನ್ ಸ್ಮಾರ್ಟ್ ಕಾರ್ಡ್ ವಿತರಣೆ
60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಿ ಕನ್ನಡಕ, ಲೆನ್ಸ್ ನೀಡಲು ಕ್ರಮ ವಹಿಸಲಾಗಿದೆ. 330 ಕೋಟಿ ರೂ. ಮೊತ್ತದ ಈ ಯೋಜನೆಯನ್ನು ಮಾರ್ಚ್ ಒಳಗಾಗಿ ಜಾರಿ ಮಾಡಿ ಉಚಿತವಾಗಿ ಈ ಸೌಲಭ್ಯ ಕಲ್ಪಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯಡಿ 1.10 ಕೋಟಿಗೂ ಅಧಿಕ ಜನರಿಗೆ ಸ್ಮಾರ್ಟ್ ಕಾರ್ಡುಗಳನ್ನು ಸಿದ್ಧಪಡಿಸಲಾಗಿದೆ.
ಡಿಸೆಂಬರ್ 9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿತರಣೆಗೆ ಚಾಲನೆ ನೀಡಲಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 1,000 ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಜನವರಿ ಅಂತ್ಯಕ್ಕೆ ರಾಜ್ಯದ 5 ಕೋಟಿ ಕಾರ್ಡ್‌ಗಳನ್ನು ನೀಡುವ ಗುರಿ ಇದೆ ಎಂದು ವಿವರಿಸಿದರು.

100 ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಹೋಬಳಿ ಮಟ್ಟದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೂಡ ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಾಗುವುದು. ರಾಜ್ಯದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯನ್ನು ಉತ್ತಮಪಡಿಸಿದ್ದು, ದಿನಕ್ಕೆ 30,000 ಇದ್ದ ಪ್ರಕ್ರಿಯೆಯನ್ನು 60,000 ಕ್ಕೆ ಏರಿಸಲಾಗಿದೆ. 500 ಮಕ್ಕಳಿಗೆ 32 ಕೋಟಿ ರೂ. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಮಾಡುತ್ತಿದ್ದು, 65 ಮಕ್ಕಳಿಗೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ಶುಚಿ ಪ್ಯಾಡ್ ನೀಡುವ ಕಾರ್ಯಕ್ರಮ ಈ ವರ್ಷದಿಂದ ಆರಂಭವಾಗಲಿದೆ ಎಂದು ಹೇಳಿದರು.

ಆಂಬ್ಯುಲೆನ್ಸ್ ಸೇವೆಯ ಸಮಸ್ಯೆ ಪರಿಹಾರ
108 ಆಂಬ್ಯುಲೆನ್ಸ್‌ನ ಸೇವೆಯಲ್ಲಿ ಹಿಂದಿನ ಸರ್ಕಾರದಿಂದ ಅನೇಕ ದೋಷಗಳಾಗಿತ್ತು. ಅದನ್ನು ಸರಿಪಡಿಸಿ ಹೊಸ ಟೆಂಡರ್ ಕರೆಯಲಾಗಿದೆ. ಜನವರಿ ಅಂತ್ಯಕ್ಕೆ ಹೊಸ ವ್ಯವಸ್ಥೆ ಬರಲಿದೆ. ಇದರಲ್ಲಿ ಅತ್ಯಾಧುನಿಕ ವ್ಯವಸ್ಥೆ, ಸಮನ್ವಯ, ಸರಿಯಾದ ಸಮಯಕ್ಕೆ ಸೇವೆ ದೊರೆಯುವಂತೆ ಇರಲಿದೆ.
ಕಳೆದ ಎರಡೂವರೆ ವರ್ಷದಿಂದ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಹೊಸ ಸ್ಪರ್ಶ ನೀಡಲಾಗಿದೆ. ವೈದ್ಯ ಹುದ್ದೆಗಳ ಭರ್ತಿ, ಮೂಲಸೌಕರ್ಯಗಳನ್ನು ಐದಾರು ಪಟ್ಟು ಹೆಚ್ಚಳ ಮಾಡಿ ಸುಧಾರಣೆ, ಶಿಸ್ತುಪಾಲನೆ, ಜನಸ್ನೇಹಿ ಕ್ರಮ ತರಲಾಗಿದೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಕೂಡ ಆರಂಭಿಸಲಾಗಿದೆ ಎಂದರು.

ವೈದ್ಯಕೀಯ ಕಾಲೇಜಿಗೆ ನಿತ್ಯ 1,500 ಜನ ಭೇಟಿ
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ 1,500 ಜನರು ಪ್ರತಿ ದಿನ ಬರುತ್ತಿದ್ದಾರೆ. ಐಪಿಡಿಗೆ 150-200 ಜನರು ಬರುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಮೇಲೆ ಜನರಿಗೆ ವಿಶ್ವಾಸ ಹೆಚ್ಚಿದೆ ಎನ್ನಬಹುದು. ಆದರೂ ಎಲ್ಲೋ ಕೆಲವರಿಂದಾಗಿ ದೂರುಗಳು ಬರುತ್ತಿವೆ. ಆದರೆ ವ್ಯವಸ್ಥೆ ಉತ್ತಮಪಡಿಸುವ ಕೆಲಸ ಮುಂದುವರಿದಿದೆ. ಎಸ್‌ಸಿ ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದಂತೆ ಸಮಸ್ಯೆ ತಲೆದೋರಿದೆ. ಇವೆಲ್ಲವನ್ನೂ ಬಗೆಹರಿಸಿದ್ದು, ಇನ್ನು ಒಂದು ತಿಂಗಳಲ್ಲಿ ನೇಮಕಾತಿ ನಡೆಯಲಿದೆ. ಹಾಸನ ಮೆಡಿಕಲ್ ಕಾಲೇಜು ಎನ್‌ಎಬಿಎಚ್ ಮಾನ್ಯತೆ ಪಡೆದಿರುವುದು ಹೆಮ್ಮೆ ತಂದಿದೆ ಎಂದರು.