ಹಾಸನ ಮೋತಿ ಹೋಟೆಲ್ ಮಸಾಲೆ ದೋಸೆ ಇನ್ನು ನೆನಪು ಮಾತ್ರ!
ಹಾಸನ, ಡಿಸೆಂಬರ್ 6: ಜನರ ಮೆಚ್ಚುಗೆ ಗಳಿಸಿದ್ದ ಹಾಸನ ನಗರದ ಮೋತಿ ಹೋಟೆಲ್ ಬಾಗಿಲು ಮುಚ್ಚಿದೆ. ಹೋಟೆಲ್‌ನ ಮಸಾಲೆ ದೋಸೆ, ಇಡ್ಲಿ ಸಾಂಬರ್‌ಗೆ ಅಪಾರ ಅಭಿಮಾನಿಗಳಿದ್ದರು.
ಮೋತಿ ಹೋಟೆಲ್ ಮಾಲೀಕ ನಾರಾಯಣರಾವ್ ಹೋಟೆಲ್ ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಣೆ ಮಾಡಿದ್ದಾರೆ. 1973ರಲ್ಲಿ ಹಾಸನ ನಗರದ ಹಳೆ ಬಸ್ ನಿಲ್ದಾಣ ರಸ್ತೆ ವಿದ್ಯಾ ಭವನದ ಮಳಿಗೆಯಲ್ಲಿ ಹೋಟೆಲ್ ಆರಂಭವಾಗಿತ್ತು.
ಹೋಟೆಲ್‌ನ ಮಸಾಲೆ ದೋಸೆ, ಇಡ್ಲಿ-ಸಾಂಬಾರ್‌ಗೆ ಅಪಾರವಾದ ಅಭಿಮಾನಿಗಳಿದ್ದರು. ಬಸ್ ನಿಲ್ದಾಣದ ಬಳಿ ಹೋಟೆಲ್ ಇದ್ದಿದ್ದರಿಂದ ಹಲವಾರು ಜನರು ಹೋಟೆಲ್‌ಗೆ ಭೇಟಿ ನೀಡಿ ದೋಸೆ ಮುರಿದಿದ್ದರು.

ಸುಮಾರು 47 ವರ್ಷಗಳ ಕಾಲ ಶುಚಿ, ರುಚಿಯಾದ ಸೇವೆಯನ್ನು ಜನರಿಗೆ ಒದಗಿಸಿ ಮನೆ ಮಾತಾಗಿದ್ದ ಹೋಟೆಲ್ ಅನಿವಾರ್ಯ ಕಾರಣಗಳಿಂದಾಗಿ ಬಂದ್ ಆಗುತ್ತಿದೆ. ಆಸರೆ ಫೌಂಡೇಷನ್ ವತಿಯಿಂದ ಹೋಟೆಲ್ ಮಾಲೀಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
"ಇಷ್ಟು ದಿನ ಯಶಸ್ವಿಯಾಗಿ ಹೋಟೆಲ್ ನಡೆಸಲಾಗಿದೆ. ಹಾಸನದ ಜನರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಹೋಟೆಲ್ ನಡೆಸುವುದು ದುಬಾರಿಯಾಗಿದೆ. ಕಟ್ಟಡದ ಬಾಡಿಗೆ, ಸಿಬ್ಬಂದಿ ವೇತನ ಎಲ್ಲವೂ ದುಬಾರಿಯಾಗಿದೆ" ಎಂದು ನಾರಾಯಣರಾವ್ ಹೇಳಿದರು.












Click it and Unblock the Notifications