ಹಾಸನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದು ನಾನು, ಜೆಡಿಎಸ್ ನಾಯಕರಲ್ಲ: ಪ್ರೀತಂ ಗೌಡ
ಹಾಸನ, ಏಪ್ರಿಲ್, 27: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ರಾಜಕೀಯ ನಾಯಕರ ನಡುವಿನ ಕಚ್ಚಾಟಗಳು ಜಾಸ್ತಿಯಾಗಿಬಿಟ್ಟಿವೆ. ಅದೇ ರೀತಿ ಹಾಸನದಲ್ಲಿ ಶಾಸಕ ಪ್ರೀತಂಗೌಡ ಮತ್ತು ರೇವಣ್ಣ ಕುಟುಂಬದ ನಡುವೆ ವಾಕ್ಸಮರಗಳು ಸಂಭವಿಸದ ದಿನವೇ ಇಲ್ಲದಂತಾಗಿದೆ. ಇಂದು ಮತ್ತೆ ಮಳೆ ಬಂದಾಗ ಜನರು ನೆಮ್ಮದಿಯಿಂದ ಜೀವನ ಮಾಡಬೇಕು. ಇಲ್ಲಿ ರಾಜಕಾಲುವೆ ಮಾಡಬೇಕು ಎನ್ನುವ ಕಲ್ಪನೆ ಕೂಡ ಅವರಿಗೆ ಇರಲಿಲ್ಲ ಎಂದು ಜೆಡಿಎಸ್ ವಿರುದ್ಧ ಪ್ರೀತಂ ಗೌಡ ಹರಿಹಾಯ್ದಿದ್ದಾರೆ.
ರಾಜಕಾಲುವೆ ಮಾಡಬೇಕು ಅನ್ನುವ ಕಲ್ಪನೆ ನಮಗೆ ಬಂದ ಕಾರಣಕ್ಕೆ ಜನರು ನನ್ನ ಜೊತೆ ಇದ್ದಾರೆ. ವಸತಿ ರಹಿತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಜೆಡಿಎಸ್‌ನವರು ಮಾಡಿದ್ದರು. ಆದರೆ ಅವರಿಗೆ ಹಕ್ಕು ಪತ್ರ ಕೊಟ್ಟು ಭದ್ರತೆ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಇಲ್ಲಿನ ಚರಂಡಿ ಪಾರ್ಕ್, ಮುಖ್ಯ ರಸ್ತೆ ಎಲ್ಲವನ್ನೂ ಮಾಡಿಸಿದ್ದು ನಾನು. ಅಭಿವೃದ್ಧಿ ಅಂದರೆ ಇದು ಎಂದು ಹೇಳುವ ಮೂಲಕ ತಮ್ಮನ್ನು ತಾವೇ ಹೊಗಳಿಕೊಂಡರು.

ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿ ಬಂದಾಗ ಎಷ್ಟು ಜನ ಬರುತ್ತಾರೆ ನೋಡಿ ಇದರ ಮೇಲೆ ಜನರ ಬೆಂಬಲ ಯಾರಿಗೆ ಇದೆ ಎನ್ನುವುದು ನಿರ್ಧಾರ ಆಗಲಿದೆ. ದೇವೇಗೌಡರ ಬಗ್ಗೆ ಕನಿಷ್ಠ ಪ್ರೀತಂಗೌಡಗೆ ಇರುವ ಗೌರವ ಅವರ ಮನೆಯವರಿಗಿಲ್ಲ. ದೇವೇಗೌಡರು ಇಡಿ ದೇಶಕ್ಕೆ ಆಸ್ತಿ.
ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕೆನ್ನುವುದು ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಅದರೆ ಅವರ ಸ್ವಾರ್ಥಕ್ಕಾಗಿ ಮಗನನ್ನ ಅಭ್ಯರ್ಥಿ ಮಾಡಲು ತುಮಕೂರಿಗೆ ಕಳುಹಿಸಿದ್ದರು. ಇದು ಅವರ ಕುಟುಂಬದಲೇ ಬಂದಿರುವ ಮಾತು ಎಂದರು.
ದೇವೇಗೌಡರ ಬಗ್ಗೆ ಹಾಸನದ ಜನ ಏನು ಗೌರವ ಇಟ್ಟಿದಾರೆ ಅದರ ಅರ್ಧಬಾಗ ಅವರ ಕುಟುಂಬ ಇಟ್ಟುಕೊಂಡರೆ ಸಾಕು. ಅವರು ರಾಜಕಾರಣ ಲಾಭ ಬಿಟ್ಟು ಮೊದಲು ಗೌರವ ಇಟ್ಟುಕೊಳ್ಳಲಿ. ಆಗ ದೇವೇಗೌಡರಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಹಾಗೆಯೆ ಇಷ್ಟು ಸುದೀರ್ಘ ರಾಜಕಾರಣ ಮಾಡಿದ ಗೌಡರನ್ನು ತುಮಕೂರಿಗೆ ಕಳುಹಿಸಿ ಸೋಲಿಸಿದ್ದನ್ನು ಯಾರೂ ಮರೆತಿಲ್ಲ ಎಂದು ಗುಡುಗಿದರು.
ನಾನು ವಿರೋಧ ಪಕ್ಷದಲ್ಲಿದ್ದರೂ ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಇನ್ನು ಮಹಿಳೆಯರಿಗೆ ಪ್ರೀತಂಗೌಡ ಅಗೌರವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನಾನು ಮಹಿಳೆಯರ ಬಗ್ಗೆ ಎಷ್ಟು ಗೌರವ ಹೊಂದಿದ್ದೇನೆ ಅನ್ನುವುದಕ್ಕೆ ಇಲ್ಲಿ ಬಂದಿರುವ ಜನರೇ ಸಾಕ್ಷಿ. ಸಮಸ್ತವಾಗಿ ನಾನು ಯಾರ ಬಗ್ಗೆಯೂ ಮಾತಾಡಿಲ್ಲ. ಈಗ ಚುನಾವಣೆ ಅಭಿವೃದ್ಧಿ ವಿಚಾರ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಜಾರಿಕೊಂಡರು.












Click it and Unblock the Notifications