Hassan Constituency: ಮತ್ತೆ ಕ್ಷೇತ್ರ ಪಡೆಯುವ ತವಕ, ದಳಪತಿಗಳ ಪ್ಲಾನ್ ಏನು? ಇಲ್ಲಿದೆ ವಿವರ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಜೆಡಿಎಸ್ ನಡುವೆ ಸಾಕಷ್ಟು ಪೈಪೋಟಿ ಏರ್ಪಡಲಿದ್ದು, ಜೆಡಿಎಸ್ ಗೆ ಟಿಕೆಟ್ ಹಂಚಿಕೆಯೆ ದೊಡ್ಡ ತಲೆನೋವಾಗಿದೆ.
ಹಾಸನ,ಫೆಬ್ರವರಿ24: ಕರ್ನಾಟಕದಲ್ಲಿ ಹಾಸನ ಜಿಲ್ಲೆ ಪ್ರಸಿದ್ಧವಾದ ಪ್ರವಾಸಿತಾಣಗಳಲ್ಲಿ ಒಂದು. ಹಾಸನ ಜಿಲ್ಲೆಗೆ ಪ್ರವಾಸಕ್ಕಾಗಿ ದೇಶ ವಿದೇಶಗಳಿಂದ ಭೇಟಿ ನೀಡುವಂತಹ ಸ್ಥಳಗಳಾದ ಗೋರೂರು ಡ್ಯಾಂ (ಅಣೆಕಟ್ಟು), ಶೆಟ್ಟಿ ಹಳ್ಳಿ ಚರ್ಚ್(ಹಾಸನ), ಬಿಸಿಲೆ ಘಾಟ್, ಹಾಸನಾಂಬೆ ದೇವಾಲಯ, ಹಾಸನ ಮ್ಯೂಸಿಯಂ ಸೇರಿದಂತೆ ಹಲವು ವಿಶೇಷತೆಗಳ ಜೊತೆಗೆ ರಾಜಕೀಯವಾಗಿಯೂ ಹಾಸನ ಜಿಲ್ಲೆ ತನ್ನದೆ ಆದ ವಿಶೇಷತೆಯನ್ನ ಹೊಂದಿದೆ.
ಹಾಸನ ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ಕ್ಷೇತ್ರಗಳನ್ನ ಜೆಡಿಎಸ್ ಕಳೆದುಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ ರೇವಣ್ಣ ಅವರ ಪ್ರಾಬಲ್ಯದ ನಡುವೆಯು ಕ್ಷೇತ್ರವನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಹಾಸನ ವಿಧಾನಸಭಾ ಕ್ಷೇತ್ರವನ್ನ ಪತ್ತೆ ಪಡೆಯುವ ಪ್ರಯತ್ನದಲ್ಲಿ ದಳಪತಿಗಳು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಭವಾನಿ ರೇವಣ್ಣ ಅವರು ಈ ಬಾರಿ ಹಾಸನದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡ ಬಳಿಕ ಜೆಡಿಎಸ್ ಪಕ್ಷದಲ್ಲೇ ಟಿಕೆಟ್ ವಿಚಾರವಾಗಿ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದು, ಈ ಬಾರಿ ಚುನಾವಣೆಯಲ್ಲಿ ಎಲ್ಲಾರ ಗಮನ ಸೆಳೆದಿರುವಂತಹ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಯಲದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಹಾಸನ ಕ್ಷೇತ್ರವನ್ನ ಮತ್ತೆ ಪಡೆಯುವ ತವಕ
ಹಾಸನ ಜೆಡಿಎಸ್ ನ ಭದ್ರಕೋಟೆ. ಇದುವರೆಗೂ ಹಾಸನದಲ್ಲಿ ಯಾವ ಪಕ್ಷಗಳಿಗೆ ದಳಪತಿಗಳು ಅವಕಾಶವನ್ನ ಮಾಡಿಕೊಟ್ಟಿರ್ಲಿಲ್ಲ. ಆದರೆ ಕಳೆದ ಬಾರಿ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಛಿದ್ರವಾಗಿ ಕಮಲ ಅರಳಲು ಕಾರಣವಾಗಿದೆ. ಇದು ದಳಪತಿಗಳಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರವನ್ನ ಮತ್ತೆ ತನ್ನ ವಶಕ್ಕೆ ಮಾಡಿಕೊಳ್ಳಲು ಜೆಡಿಎಸ್ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಆದರೆ, ಯಾರನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕು ಎಂಬ ಗೊಂದಲವೇ ಜೆಡಿಎಸ್‌ಗೆ ದೊಡ್ಡ ತಲೆ ನೋವಾಗಿದೆ. ಈಗಾಗಲೇ ಪಕ್ಷದಲ್ಲಿ ಸಮರ್ಥ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನೊಂದು ಕಡೆ ಹಾಸನ ಕ್ಷೇತ್ರದ ಟಿಕೆಟ್ ಘೋಷಣೆಗೆ ಮುನ್ನವೇ ಈ ಕ್ಷೇತ್ರದಲ್ಲಿ ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದು, ಹಾಸನ ಮತ್ತೆ ಪಡೆಯುವ ತವಕದಲ್ಲಿದ್ದ ದಳಪತಿಗಳಿಗೆ ಟಿಕೆಟ್ ಹಂಚಿಕೆಯೆ ದೊಡ್ಡ ತಲೆನೋವಾಗಿದೆ.

ಟಿಕೆಟ್ ಗಾಗಿ ಭವಾನಿ ರೇವಣ್ಣ,ಸ್ವರೂಪ್ ಫೈಟ್
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಫೈಪೋಟಿ ನಡೆಸಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ಜೆಡಿಎಸ್ ಗೆ ದೊಡ್ಡ ತಲೆನೋವಾಗಿದೆ. ಇತ್ತ ಟಿಕೆಟ್ ಹಂಚಿಕೆ ಮುನ್ನವೇ ಭವಾನಿ ರೇವಣ್ಣ ಪ್ರಚಾರ ಕಾರ್ಯವನ್ನೂ ಶುರು ಮಾಡಿದ್ರೆ, ಇತ್ತ ಸ್ವರೂಪ್ ಪ್ರಕಾಶ್ ಸಹ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಒಂದು ಕಡೆ ಕುಮಾರಸ್ವಾಮಿ ಅವರ ಮೇಲೆ ಸಾಕಷ್ಟು ವಿಶ್ವಾಸವನ್ನ ಇಟ್ಟುಕೊಂಡಿರುವ ಸ್ವರೂಪ್ ಪ್ರಕಾಶ್ ಒಂದು ಕಡೆಯಾದ್ರೆ ಇನ್ನೊಂದು ಕಡೆ ಟಿಕೆಟ್ ಗಾಗಿ ಪಟ್ಟು ಬಿಡದ ರೇವಣ್ಣ ದಂಪತಿಗಳು ಸಹ ಟಿಕೆಟ್ ಗಾಗಿ ದೇವೇಗೌಡರ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ಇಬ್ಬರಲ್ಲಿ ಬಹುತೇಕ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೆಡಿಎಸ್ ಭದ್ರಕೋಟೆಯ ಹಾಸನದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ
ಹಾಸನ ಜಿಲ್ಲೆ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ, ಕಳದೆ ನಾಲ್ಕು ಬಾರಿಯು ಗೆಲುವು ಸಾಧಿಸಿದ್ದ ಜೆಡಿಎಸ್ ಕೋಟೆಯಲ್ಲಿ 2018 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಈ ಬಾರಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರನ್ನ ಸೋಲಿಸಲೇ ಬೇಕು ಎಂದು ಜೆಡಿಎಸ್ ನಾಯಕರು ಪಣತೊಟ್ಟಿದ್ದಾರೆ.
ಇತ್ತ ಬಿಜೆಪಿ ಶಾಸಕ ಪ್ರೀತಂ ಗೌಡ ಸಹ ಪದೇ ಪದೇ ರೇವಣ್ಣ ಅವರ ಕುಟುಂಬದ ವಿರುದ್ದ ಕಿಡಿಕಾರುತ್ತಾ. ಬಿಜೆಪಿಯ ಶಕ್ತಿ ಪ್ರದರ್ಶನವನ್ನ ನಡೆಸುತ್ತಿದ್ದಾರೆ. ಒಂದು ಕಡೆ ಸ್ವರೂಪ್ ಅವರಿಗೆ ಟಿಕೆಟ್ ಕೈ ತಪ್ಪಿದರೆ ಜೆಡಿಎಸ್ ನಲ್ಲಿ ಉಂಟಾಗುವ ಅಸಮಾಧಾನಗಳು ಬಿಜೆಪಿ ವರವಾಗುವ ಸಾಧ್ಯತೆ ಇದೆ. ಆದರೆ ಕ್ಷೇತ್ರವನ್ನ ಮರಳಿ ಪಡೆಯುವ ತವಕದಲ್ಲಿರುವ ದಳಪತಿಗಳು ಚುನಾವಣೆಗಾಗಿ ಯಾವ ತಂತ್ರಗಾರಿಕೆಯನ್ನ ನಡೆಸಿದ್ದಾರೆ ಎಂಬುದು ಮಾತ್ರ ಇನ್ನೂ ತಿಳಿಯದ ವಿಚಾರವಾಗಿದೆ. ಇನ್ನೂ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸುವ ನಿಟ್ಟಿನಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಹಿಡಿತವೇ ಇಲ್ಲದ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಕೈ ಪೈಪೋಟಿ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೇಳಿಕೊಳ್ಳುವಂತಹ ವರ್ಚಸ್ಸು ಇಲ್ಲದಿಂದರೂ, ಈ ಬಾರಿ ಚುನಾವಣೆಗಾಗಿ ಸಾಕಷ್ಟು ಆಕಾಂಕ್ಷಿಗಳು ಅರ್ಜಿಯನ್ನ ಸಲ್ಲಿಸಿದ್ದು, ರಾಜಕೀಯವಾಗಿ ಜಿದ್ದಾಜಿದ್ದಿನ ಅಖಾಡಕ್ಕಿಳಿಯಲು ಟಿಕೆಟ್ ಫೈಟ್ ಪ್ರಾರಂಭವಾಗಿದೆ. ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಬಿ.ಕೆ.ರಂಗಸ್ವಾಮಿ, ದೇವರಾಜೇಗೌಡ, ದಿನೇಶ್ ಸೇರಿದಂತೆ ಇನ್ನೂ ಹಲವು ಜನರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಅಂದಾಜು ಮತದಾರರು
ಒಟ್ಟು ಮತದಾರರು- 2,35,262
ಪುರುಷ ಮತದಾರರು-1,18,324
ಮಹಿಳಾ ಮತದಾರರು-1,16,938
ಇತರೆ ಮತದಾರರು- 5












Click it and Unblock the Notifications