'ವಿಕಾಸ ಯಾತ್ರೆ' ಯಶಸ್ಸಿಗಾಗಿ ದೇವೇಗೌಡರಿಂದ ಹೋಮ
Recommended Video

ಹಾಸನ, ನವೆಂಬರ್ 6 : ಜೆ.ಡಿ.ಎಸ್ ಅನ್ನು ಅಧಿಕಾರಕ್ಕೆ ತರಲೇ ಬೇಕೆಂದು ಶತಾಯಗಥಾಯ ಶ್ರಮಿಸುತ್ತಿರುವ ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಪಕ್ಷಕ್ಕೆ ಆಶೀರ್ವಾದ ಬೇಡಿ ಇದೀಗ ದೇವರ ಮೊರೆ ಹೋಗಿದ್ದಾರೆ.
ಜೆ.ಡಿ.ಎಸ್ ನ ವಿಕಾಸ ಯಾತ್ರೆಗೆ ಇನ್ನು ಒಂದು ದಿನ ಇರುವಂತೆ ತಮ್ಮ ಹುಟ್ಟೂರು ಹಾಸನದ ಹರದನಹಳ್ಳಿಯಲ್ಲಿ ಹೋಮ ನಡೆಸುತ್ತಿರುವ ದೇವೇಗೌಡ ಅವರು ಯಾತ್ರೆಗೆ ಯಾವುದೇ ಅಡ್ಡ ಆತಂಕ ಎದುರಾಗದೇ ಯಾತ್ರೆ ಯಶಸ್ವಿ ಆಗಲೆಂದು ಪ್ರಾರ್ಥಿಸುತ್ತಿದ್ದಾರೆ.

ಹೋಮದಲ್ಲಿ ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ, ಮಗ ರೇವಣ್ಣ, ಭವಾನಿ ರೇವಣ್ಣ, ಮೊಮ್ಮಗ ಡಾ.ಸೂರಜ್ ಅವರು ಪಾಲ್ಗೊಂಡಿದ್ದು, ಕುಮಾರಸ್ವಾಮಿ ಅವರ ಕುಟುಂಬವೂ ಹೋಮದಲ್ಲಿ ಪಾಳ್ಗೊಳ್ಳುವ ನಿರೀಕ್ಷೆ ಇದೆ.
ಸ್ವಗೃಹದಲ್ಲಿ ಹೋಮ ಮುಗಿಸಿದ ನಂತರ ಕುಟುಂಬ ಸದಸ್ಯರೆಲ್ಲರೂ ಸಂಜೆ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಲಿದ್ದಾರೆ.
ದೇವರಲ್ಲಿ ಅಪರಿಮಿತ ನಂಬಿಕೆಯುಳ್ಳ ದೇವೇಗೌಡ ಅವರು ಹುಟ್ಟೂರಿನಲ್ಲಿ ನಿಯಮಿತವಾಗಿ ದೇವರ ಕಾರ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಚುನಾವಣಾ ಸಂದರ್ಭದಲ್ಲಿಯೂ ದೇವರ ಆಶೀರ್ವಾದ ಪಡೆಯುವುದನ್ನು ದೊಡ್ಡಗೌಡರು ಮರೆಯುವುದಿಲ್ಲ. ಇತ್ತೀಚೆಗೆಗಷ್ಟೆ ಜೆ.ಪಿ ನಗರದ ಪಕ್ಷದ ಕಚೇರಿಯಲ್ಲಿಯೂ ಹೋಮ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನವೆಂಬರ್ 07ರ ಮಂಗಳವಾರ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮೈಸೂರಿನಿಂದ ಕುಮಾರಸ್ವಾಮಿ ನೇತೃತ್ವದಲ್ಲಿ ಜೆ.ಡಿ.ಎಸ್ ನ ವಿಕಾಸ ಯಾತ್ರೆ ಆರಂಭವಾಗಲಿದ್ದು ಸಕಲ ತಯಾರಿಗಳೂ ಪೂರ್ಣಗೊಂಡಿವೆ. ವಿಕಾಸ ಯಾತ್ರೆ ರಾಜ್ಯ ಪರ್ಯಟನೆ ಮಾಡಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷದ ಹುಳುಕುಗಳನ್ನು ಬಯಲಿಗೆಳೆದು ಪ್ರಾದೇಶಿಕ ಪಕ್ಷದ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ.












Click it and Unblock the Notifications