ನಾನು ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ: ಸೂರಜ್ ರೇವಣ್ಣ ಹೇಳಿದ್ದು ಯಾರಿಗೆ?
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಸನದಲ್ಲಿ ಅಬ್ಬರಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿರುವ ಸೂರಜ್, ನಾನು ನೆನ್ನೆ ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆದವನಲ್ಲ ಎಂದು ತೊಡೆತಟ್ಟಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಈ ರೀತಿ ಗುಡುಗಿದ್ದಾರೆ.
ನಾನು ನಿಮ್ಮ ತಾತನಂತೆ ಕುತಂತ್ರ ಮಾಡಿ ಎಂಎಲ್‌ಸಿ ಆದವನ್ನಲ್ಲ. ಇಂದು ಅಚಾನಕ್ಕಾಗಿ ಎಂಪಿ ಆಗಿರುವರರ ತಾತ 25 ವರ್ಷದ ಹಿಂದೆ ನಮ್ಮಜ್ಜಿ, ತಾಯಿ ಮೇಲೆ ಆಸಿಡ್ ದಾಳಿ ಮಾಡಿದ್ದನ್ನು ಯಾರೂ ಮರೆತಿಲ್ಲ. ಈ ಘಟನೆ ಇಲ್ಲಿರೋ ಹಿರಿಯರಿಗೆ ಚೆನ್ನಾಗಿ ಗೊತ್ತಿರುತ್ತೆ. ಇವರು ದೇವೇಗೌಡರ ಕುಟುಂಬವನ್ನ ಮುಗಿಸ್ತಾರಂತೆ ಎಂದು ತಿರುಗೇಟು ನೀಡಿದ್ದಾರೆ.

ಈ ರೀತಿ ಕುತಂತ್ರ, ಒಳಸಂಚಿನಿಂದ ನಮ್ಮಜ್ಜಿ ಹಾಗೂ ಅಮ್ಮನ ಮೇಲೆ ಶಿವನ ದೇವಾಲಯ ಬಳಿಯೇ ಆಸಿಡ್ ದಾಳಿ ಮಾಡಿಸಿದ್ದರು. ಆಗಲೂ ಕಾಂಗ್ರೆಸ್ ಸರ್ಕಾರವಿತ್ತು. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇವರಿಗೆಲ್ಲ ದೇವೇಗೌಡರು, ರೇವಣ್ಣನ ಕುಟುಂಬ ಮುಗಿಸೋದೇ ದೊಡ್ಡ ಗುರಿ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ಹಾಗೂ ಎದುರಾಳಿ ಪಕ್ಷದವರು ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಒಂದು ಮಾತನ್ನು ಹೇಳುತ್ತೇನೆ. ಇಲ್ಲಿ ಯಾವುದೂ ಶಾಶ್ವತವಲ್ಲ, ಹಾಗೆಯೇ ಯಾವ ಸರ್ಕಾರವೂ ಶಾಶ್ವತವಲ್ಲ. ಎಲ್ಲರೂ ನಾನು ಮಾಡಿದ್ದು, ನನ್ನಿಂದಲೇ ಆಗಿದ್ದು ಅಂತೀರಲ್ಲ? ಅವರೆಲ್ಲ ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ ಎಂದು ಸಲಹೆ ನೀಡಿದ್ದಾರೆ.

ಸ್ಮಶಾನಕ್ಕೆ ಹೋದರೆ ಹೇಗಿದ್ದವರು ಏನಾದರು ಎಂಬುದು ಚೆನ್ನಾಗಿ ಗೊತ್ತಾಗುತ್ತೆ. ಇಲ್ಲಿ ಏನಿದ್ದರೂ ನಾವು ಮಾಡೋ ಒಳ್ಳೆ ಕೆಲಸ ಮಾತ್ರ ಉಳಿಯುತ್ತದೆಯೇ ಹೊರತು, ದ್ವೇಷ ರಾಜಕಾರಣವಲ್ಲ ಎಂದು ಸೂರಜ್ ಹೇಳಿದ್ದಾರೆ. ರಾಜ್ಯದ ಜನರ ಒಳ್ಳೆಯ ಕೆಲಸ ಮಾಡಲಿ ಎಂದು 135 ಸ್ಥಾನ ಕೊಟ್ಟಿದ್ದಾರೆ. ಆ ಕೆಲಸ ಮಾಡೋದು ಬಿಟ್ಟು, ದಿನಬೆಳಗಾದ್ರೆ ರೇವಣ್ಣ ಅವರ ಕುಟುಂಬ ಹಾಳು ಮಾಡೋದು ಹೇಗೆ? ದೇವೇಗೌಡರನ್ನು ತುಳಿಯೋದು ಹೇಗೆ? ಎಂದು ಯೋಚನೆ ಮಾಡೋದೆ ಆಗಿದೆ ಎಂದು ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಹಲವು ತಿಂಗಳಾಯಿತು. ಯಾವ ರೈತರಿಗೆ ಒಳ್ಳೆಯದಾಗಿದೆ? ಬರೀ ದ್ವೇಷ ರಾಜಕಾರಣವೇ ತುಂಬಿದೆ. ಸೂರ್ಯ ಹುಟ್ಟೋದು ಒಂದು ಬಾರಿಯಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ, ಅದೇ ರೀತಿ ನಿಮ್ಮ ಪ್ರಜ್ವಲ್ ಅಣ್ಣ ಹಾಗೂ ಸೂರಜ್ ಅಣ್ಣ ಪ್ರಜ್ವಲಿಸುತ್ತಾರೆ. ಹಾಸನ ಜಿಲ್ಲೆಯ ಋಣ ತೀರಿಸುವ ಕೆಲಸವನ್ನು ನಾವು ಮಾಡೇ ಮಾಡ್ತೀವಿ ಎಂದು ತೊಡೆತಟ್ಟಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೆ ಅಂತ ಕೆಲವರು ಮೆರೆಯುತ್ತಿದ್ದಾರೆ. ಇದಕ್ಕೆ ಮುಂದೆ ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಸೂರಜ್ ಎಚ್ಚರಿಸಿದ್ದಾರೆ.












Click it and Unblock the Notifications