ಸಕಲೇಶಪುರ ತಾಲೂಕಿನ ಬಳಿ ಸಮೀಪ ಗುಡ್ಡ ಕುಸಿತ: ಕುಕ್ಕೆ ಸುಬ್ರಹ್ಮಣ್ಯ ರಸ್ತೆ ಬಂದ್
ಹಾಸನ, ಜುಲೈ, 24: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣಾರ್ಭಟ ಮುಂದುವರೆದಿದೆ. ಭಾರೀ ಮಳೆ ಸುರಿದ ಪರಿಣಾಮ ಸಕಲೇಶಪುರ ತಾಲೂಕಿನ ಬಿಸಿಲೆ ಸಮೀಪದಲ್ಲಿನ ರಸ್ತೆಗೆ ಗುಡ್ಡದ ಮಣ್ಣು ಕುಸಿದಿದ್ದು, ಈ ಮಾರ್ಗದಲ್ಲಿ ಹಾದುಹೋಗುವ ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ನಿರಂತರ ಮಳೆಯಿಂದ ತಾಲೂಕಿನ ಬಿಸಿಲೆ ಸಮೀಪದಲ್ಲಿನ ರಸ್ತೆಗೆ ಗುಡ್ಡ ಕುಸಿದು ಇಲ್ಲಿನ ಸಂಪರ್ಕ ಸ್ಥಗಿತವಾಗಿದೆ. ಇದರಿಂದ ಸುಬ್ರಹ್ಮಣ್ಯಕ್ಕೆ ಹೂಗುವಂತಹ ಪ್ರವಾಸಿಗರಿಗೆ ಪೀಕಲಾಟ ಶುರುವಾಗಿದೆ. ಇದೇ ಮಾರ್ಗದಲ್ಲಿ ಬೆಳಗ್ಗೆಯೂ ಮರ ಬಿದ್ದು ಕೆಲ ಗಂಟೆಗಳ ಸಂಚಾರ ಸ್ಥಗಿತವಾಗಿತ್ತು. ಇದೀಗ ಗುಡ್ಡ ಕುಸಿದು ಮತ್ತೆ ಸಂಪರ್ಕ ಸ್ಥಗಿತವಾಗಿದೆ. ಮಳೆ ಆರ್ಭಟ ಹೆಚ್ಚಾಗಿರುವ ಹಿನ್ನೆಲೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಶಾಲೆಗಳಿಗೆ ರಜೆ ಘೋಷಣೆ
ಹಾಗೇಯೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
ತುಂಬು ತುಳುಕುತ್ತಿರುವ ಮದಗದ ಕೆರೆ
ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನದಿ, ಹಳ್ಳ ಕೊಳ್ಳ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗೆಯೇ ಜಿಲ್ಲೆಯ ಮಾಯದಂತ ಮಳೆ ಬಂತಣ್ಣ ಮದಗದ ಕೆರೆ ಈಗ ತುಂಬಿದ್ದು, ನೀರಿನ ಬವಣೆಯಿಂದ ಜನರನ್ನು ಪಾರು ಮಾಡಿದೆ.
ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ 2036 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಬೃಹತ್ ಕೆರೆ ಮಳೆಯ ಕೊರತೆಯಿಂದ 15 ದಿನಗಳ ಹಿಂದೆ ಸಂಪೂರ್ಣ ಖಾಲಿಯಾಗಿತ್ತು. ಈಗ ಭಾರೀ ಮಳೆ ಹಿನ್ನೆಲೆ ಅರ್ಧಕ್ಕಿಂತ ಹೆಚ್ಚು ತುಂಬಿದೆ. ಇದರಿಂದ ಕೆರೆಯನ್ನೇ ನಂಬಿದ್ದ ಸುಮಾರು 34 ಹಳ್ಳಿಗಳ ಜನ-ಜಾನುವಾರುಗಳಿಗೆ ಜೀವ ಬಂದಾಂತಾಗಿದೆ.
ಮೈದುಂಬಿ ಹರಿಯುತ್ತಿರುವ ಕಲ್ಲತ್ತಿಗಿರಿ ಫಾಲ್ಸ್
ಹಾಗೆಯೇ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ ಮೈದುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹೀಗೆ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲೆನಾಡ ಭಾಗದ ನದಿ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. 15 ದಿನಗಳ ಕಲ್ಲತ್ತಿಗಿರಿ ಜಲಪಾತ ನೀರಿಲ್ಲದೆ ಬರಿದಾಗಿತ್ತು. ಇದೀಗ ಭಾರೀ ಮಳೆ ಹಿನ್ನೆಲೆ ಉಕ್ಕಿ ಹರಿಯುತ್ತಿದೆ.
ಬಡವರ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಕಲ್ಲತ್ತಿಗಿರಿ ಜಲಪಾತ ನೋಡದೆ ವಾಪಸ್ ಆಗುವುದಿಲ್ಲ. ಇಲ್ಲಿನ ಧುಮ್ಮಿಕ್ಕುತ್ತಿರುವ ಗುಡ್ಡದ ಕೆಸರು ಮಿಶ್ರಿತ ಕೆಸರು ಮಣ್ಣಿನ ನೀರಿನಲ್ಲೇ ಪ್ರವಾಸಿಗರ ಮೋಜು ಮಾಡುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನಲ್ಲಿ ಮಧ್ಯೆ ನಿಂತು ಪ್ರವಾಸಿಗನೊಬ್ಬ ಹುಚ್ಚಾಟ ಮೆರೆದಿರುವ ದೃಶ್ಯ ವೈರಲ್ ಆಗಿದೆ.












Click it and Unblock the Notifications