ಹಾಸನ ಜಿಲ್ಲೆಯಲ್ಲಿ ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ, ಹಾನಿ ವಿವರ ಇಲ್ಲಿದೆ
ಹಾಸನ, ಮೇ, 30: ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ಸಾಕಷ್ಟು ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಅದೇ ರೀತಿ ಹಾಸನ ಜಿಲ್ಲೆಯ ಹಲವೆಡೆ ನಿನ್ನೆ ಭಾರೀ ಮಳೆ ಸುರಿದ ಹಿನ್ನೆಲೆ ಅಪಾರ ಹಾನಿ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ ಪ್ರದೇಶಗಳಲ್ಲಿ ಎಷ್ಟು ಹಾನಿಯಾಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲವೆಡೆ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ವಿದ್ಯುತ್ ಕಂಬಗಳು, ಬೃಹತ್ ಗಾತ್ರದ ಮರಗಳು ನೆಲಕ್ಕುರಳಿವೆ. ಮತ್ತೊಂದೆಡೆ ವಾಸದ ಮನೆಗಳ ಮೇಲ್ಛಾವಣಿಗಳು ಗಾಳಿಗೆ ತೂರಿಕೊಂಡು ಹೋಗಿದ್ದು, ಇದರಿಂದ ಹಾನಿಗೊಳಗಾದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಬೇಲೂರು, ಚೀಕನಹಳ್ಳಿ, ಮೂಡಿಗೆರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತು ಮೂರು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಮತ್ತೊಂದೆಡೆ ಕೋನೆರ್ಲು ಗ್ರಾಮದಲ್ಲಿ ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಇನ್ನು ಭಾರಿ ಮಳೆಯಿಂದ ಟ್ರಾನ್ಸ್‌ಫಾರ್ಮರ್‌ಗಳು ಹಾಳಾದ ಹಿನ್ನೆಲೆ ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಬೇಲೂರು ತಾಲೂಕಿನ, ಬಳ್ಳೂರು ಗ್ರಾಮದಲ್ಲಿ ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ನೂರಾರು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಕಾಂಗಾಲಾಗಿದ್ದಾರೆ. ಅಲ್ಲದೆ ಗಾಳಿ, ಮಳೆಯಿಂದ ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸುತ್ತಿದ್ದಾರೆ. ಇಷ್ಟೆಲ್ಲ ಅನಾಹುತಗಳು ಆದರೂ ಕೂಡ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರುತ್ತಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications