ಹಾಸನ ವಿಮಾನ ನಿಲ್ದಾಣ; ತುರ್ತು ಕಾಮಗಾರಿಗೆ ಶೀಘ್ರ ಅನುದಾನ
ಹಾಸನ, ಮಾರ್ಚ್ 19: " ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತುರ್ತು ಕಾಮಗಾರಿಗಳಿಗೆ ಬೇಕಾಗಿರುವ ಅನುದಾನವನ್ನು ಶೀಘ್ರವಾಗಿ ಒದಗಿಸಲಾಗುವುದು" ಎಂದು ಇಂಧನ ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಹೇಳಿದರು.
ಶುಕ್ರವಾರ ಅವರು ಹಾಸನ ಜಿಲ್ಲಾಧಿಕಾರಿಗಳು, ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಆದಷ್ಟು ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಾಗಾರಿ ಪ್ರಾರಂಭವಾಗಬೇಕಿದ್ದು, ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಶೀಘ್ರವಾಗಿ ಮಾಡುವಂತೆ ಸೂಚಿಸಿದರು.
ಮೂಲಭೂತ ಸೌಕರ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ವಿ. ಚೈತ್ರಾ ಮಾತನಾಡಿ, "ಹಾಲಿ 9 ಕಿ.ಮೀ. ವ್ಯಾಪ್ತಿಯಲ್ಲಿರುವ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿಗಳನ್ನು ಹಾಗೂ ಟವರ್‌ಗಳನ್ನು ತೆಗೆದು 17 ಕಿ.ಮೀ. ದೂರದಿಂದ ವಿದ್ಯುತ್ ಸಂಪರ್ಕ ವಿಸ್ತರಿಸಬೇಕಾಗಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ಇಲಾಖೆಯಿಂದ ಒದಗಿಸಿ ಕೊಡಬೇಕಾಗಿದ್ದು, ಭೂ ಪರಿಹಾರ ಧನ ಬಿಡುಗಡೆ ಆದಷ್ಟು ಬೇಗ ಮಾಡಲಾಗುವುದು" ಎಂದರು.

ರಸ್ತೆಗಳ ಅಭಿವೃದ್ಧಿ; ಹಾಸನ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಡಿಕೊಡುವಂತೆ ಕೋರಲಾಗಿದೆ. ವಿದ್ಯುತ್ ಮಾರ್ಗ ಬದಲಾವಣೆಗೆ ಪರಿಹಾರ ನೀಡಿದ ನಂತರ ರೈತರು ತಮ್ಮ ಜಮೀನನ್ನು ನಿಡುವುದಾಗಿ ತಿಳಿಸಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಹಾಸನ ವಿಮಾನ ನಿಲ್ದಾಣ; ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದ ದಶಕಗಳ ಕನಸು. ನಗರದ ಹೊರವಲಯದ ಬೂವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. 2007ರಲ್ಲಿ 1,200 ಕೋಟಿ ರೂ.ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಲಾಯಿತು. ಆದರೆ, ಬಳಿಕ ಯಾವುದೇ ಕಾಮಗಾರಿಗಳು ನಡೆಯಲಿಲ್ಲ.











Click it and Unblock the Notifications