Hasanamba Utsav 2023: ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ ಆರಂಭ, ಈ ಬಾರಿ ದೀಪಾಲಂಕಾರ ಸ್ವಲ್ಪ ಡಿಫ್ರೆಂಟ್
ಹಾಸನ, ನವೆಂಬರ್, 01: ನಾಳೆಯಿಂದ (ನವೆಂಬರ್ 02) ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಈ ಜಾತ್ರೆ ನವೆಂಬರ್ 15ರವರೆಗೆ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ದೀಪಾಲಂಕಾರದಿಂದ ಮುಖ ಬೀದಿಗಳು ಜಗಮಗಿಸುತ್ತಿವೆ.
ಹಾಸನಾಂಬ ಉತ್ಸವ ಹಿನ್ನೆಲೆ ನಗರದಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಇದನ್ನು ಕಂಡ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಈ ಬಾರಿ ನಗರದ ತುಂಬೆಲ್ಲಾ ಮೈಸೂರು ದಸರಾ ಮಾದರಿಯಲ್ಲೇ ದೀಪಾಲಂಕಾರ ವ್ಯವಸ್ಥೆ ಮಾಡಿದೆ. ಇನ್ನು ನಗರದ ಎಂಟು ಕಡೆ ಭಕ್ತರಿಗೆ ಸ್ವಾಗತ ಕೋರಲು ಕಮಾನುಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನು ಕಳೆದ ಬಾರಿ ದೇವಿ ದರ್ಶನಕ್ಕೆ 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲಿಯೂ ಈ ಬಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಹಿನ್ನೆಲೆ ಈ ಬಾರಿ ವಿಶೇಷ 10 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದ್ದರಿಂದ ಕೆಎಸ್ಆರ್‌ಟಿಸಿ ಇದೆ ಮೊದಲ ಬಾರಿಗೆ 100 ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಹಾಸನ ವಿಭಾಗದಿಂದ 100 ವಿಶೇಷ ಬಸ್‌ಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಅಂತರ ಜಿಲ್ಲೆಗಳಿಂದ ಓಡಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹೊರ ಜಿಲ್ಲೆಗಳ ವಿಭಾಗದ ಬಸ್‌ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಳಕೆ ಮಾಡಲು ನಿರ್ಧಾರ ಮಾಡಿದ್ದಾರೆ.
ಹಾಸನಾಂಬ ದೇಗುಲದ ಬಾಗಿಲು ನವೆಂಬರ್ 2ರಂದು ತೆರೆಯಲಿದ್ದು, ಪ್ರಥಮ ದಿನದಂದು ಸಾರ್ವಜನಿಕ ದರ್ಶನ ಇಲ್ಲದ ಕಾರಣ ನವೆಂಬರ್ 3ರಿಂದ ವಿಶೇಷ ಬಸ್‌ಗಳು ಕಾರ್ಯಾಚರಣೆ ಪ್ರಾರಂಭಿಸಲಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ಕುಮಾರ್ ತಿಳಿಸಿದ್ದಾರೆ.
ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ 15ದಿನಗಳ ಕಾಲ ನಗರದ ಮುಖ್ಯರಸ್ತೆ ಮತ್ತು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್ನು ಹಾಸನಾಂಬ ದೇವಿ ಗರ್ಭಗುಡಿ ಮುಂಭಾಗ ಆವರಣ ಕಿರಿದಾಗಿರುವ ಕಾರಣ ಹಾಗೂ ಸಮರ್ಪಕ ಗಾಳಿ ಬೇಕೆಂಬ ಕಾರಣದಿಂದ 4 ಟನ್ ಎಸಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಗಣ್ಯರು, ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ನೀಡುವ ಪಾಸ್ ದುರುಪಯೋಗ ತಡೆಗಟ್ಟಲು ಈ ಬಾರಿ ಪಾಸ್‌ಗೆ ಬಾರ್‌ಕೋಡ್ ತಂತ್ರಜ್ಞಾನ ಬಳಸಲಾಗುತ್ತಿದೆ. ಅಲ್ಲದೆ ಹಾಸನಾಂಬ ಉತ್ಸವ ಹಿನ್ನೆಲೆ ಪ್ರವಾಸಿಗರು, ಭಕ್ತರಿಗಾಗಿ ನಗರ ಪ್ರದಕ್ಷಿಣೆ ಮಾಡಲು ಬಯಸುವವರಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಪ್ಯಾರಾ ಸೈಲಿಂಗ್ ಕೂಡ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications