Hasanamba 2023: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ: ಇಲ್ಲಿದೆ ಸಂಪೂರ್ಣ ವಿವರ
Hasanamba Temple Opening 2023: ಹಾಸನ, ನವೆಂಬರ್ 02: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲು ಈ ವರ್ಷ ನವೆಂಬರ್ 2ರಂದು ಅಂದರೆ ಇಂದು ಸಂಪ್ರದಾಯ ಬದ್ಧವಾಗಿ ತೆರೆಯಲಿದೆ. ಕಳೆದ ವರ್ಷ ಬಂದ್ ಆಗಿದ್ದ ದೇಗುಲದ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತ ಹಾಗೂ ಗಣ್ಯರ ಸಮ್ಮುಖದಲ್ಲಿ ತೆರೆಯಲಿದೆ.
ಇಂದಿನಿಂದ ನವೆಂಬರ್ 15ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, 14 ದಿನಗಳ ಕಾಲ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ ಇಂದು ಮತ್ತು 15 ರಂದು ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ದರ್ಶನೋತ್ಸವ ಹಿನ್ನಲೆಯಲ್ಲಿ ಹಾಸನಾಂಬೆ ಸಿದ್ದೇಶ್ವರ ದೇವಾಲಯಗಳು ಅದ್ಧೂರಿಯಾಗಿ ಸಿಂಗಾರಗೊಂಡಿದೆ. ಮಧ್ಯಾಹ್ನ 12 ಗಂಟೆಗೆ ದೇವಾಲಯದ ಗರ್ಭಗುಡಿ ಬಾಗಿಲು ವಿದ್ಯುಕ್ತವಾಗಿ ತೆರೆಯಲಿದೆ. ಆದಿಚುಂನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀಹಾಸನಾಂಬ ದರ್ಶನನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಿದೆ.
ಕಳೆದ ವರ್ಷ ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲ ಬಾಗಿಲು ತೆರೆದಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಲಾಗಿತ್ತು, ಪ್ರತಿ ದಿನ 30 ರಿಂದ 50 ಸಾವಿರ ಭಕ್ತರಂತೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದರು.

ಇನ್ನು ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ರಸ್ತೆಗಳ ದುರಸ್ತಿ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ, ಆಹ್ವಾನ ಪತ್ರಿಕೆಗಳ ಮುದ್ರಣ, ವಿಐಪಿ ಹಾಗೂ ವಿವಿಐಪಿ ಪಾಸ್ ವಿತರಣೆ, ಭಕ್ತಾಧಿಗಳು ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಲಾಡು ಪ್ರಸಾದ, ದೊನ್ನೆ ಪ್ರಸಾದ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.












Click it and Unblock the Notifications