ಹಾಸನಾಂಬ ಗರ್ಭಗುಡಿಯ ಬಾಗಿಲು ಬಂದ್, ಜಾತ್ರೆ ಸಂಪನ್ನ
ಹಾಸನ, ಅಕ್ಟೋಬರ್, 27; ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಇಂದಿಗೆ (ಅಕ್ಟೋಬರ್ 27) ತೆರೆ ಬಿದ್ದಿದ್ದು, ಮಧ್ಯಾಹ್ನ 12:47ಕ್ಕೆ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗಿದೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಅರ್ಚನಾ, ಎಸ್‌ಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು. ಆಗಮಿಸಿದ್ದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಟ್ಟಿದ್ದು, ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ ಪುರೋಹಿತರು ಬಾಗಿಲನ್ನು ಮುಚ್ಚಿದ್ದಾರೆ.
ಜಾತ್ರಾ ಮಹೋತ್ಸವ ಮುಕ್ತಾಯ
ಇನ್ನು ತಾಯಿ ದರ್ಶನಕ್ಕೆ ಒಂದು ವರ್ಷ ಕಾಯಲೇಬೇಕಿದೆ. ಹಾಸನಾಂಬೆ ಈ ಭಾರಿ 15 ದಿನಗಳ ಕಾಲ ದರ್ಶನ ನೀಡಿದ್ದು, ಅಕ್ಟೋಬರ್ 13 ರಿಂದ 27 ರವರೆಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆದಿದೆ. ಅಕ್ಟೋಬರ್ 13ರಿಂದ ಹಾಸನದ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಿದ್ದು, 15 ದಿನ ದೇವಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಭಕ್ತರಿಗೆ ಮಾತ್ರ 13 ದಿನಗಳ ಕಾಲ ದರ್ಶನ ನೀಡಿದ್ದು, ಭಕ್ತಾಧಿಗಳಿಗೆ ಯಾವ ಸಮಸ್ಯೆ ಆಗದಂತೆ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ.

ಎರಡು ದಿನ ಮಾತ್ರ ಭಕ್ತರಿಗೆ ನಿರ್ಬಂಧ
ಹಾಸನ ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ಹೊರತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಇರಿಸಲಾಗಿತ್ತು. ಸಂಪ್ರದಾಯಂತೆ ಮಡಿವಾಳರು ಪಂಜು ಹಿಡಿದು ಮತ್ತು ಮುತ್ತೈದೆಯರು ಆರತಿಯನ್ನಯ ಬೆಳಗಿದ್ದ. ಈ ವೇಳೆ ಭಕ್ತರು ಹಾಸನಾಂಬೆ ದೇವಿಗೆ ಜೈಕಾರ ಕೂಗಲಾಗಿತ್ತು. ಬೆಳ್ಳಿ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬೆ ದೇಗುಲಕ್ಕೆ ತರಲಾಗಿತ್ತು. ಒಡವೆ ಕೊಂಡೊಯ್ಯುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ ಹದಿನೈದು ದಿನಗಳ ಕಾಲ ದೇವಾಲಯ ಬಾಗಿಲು ತೆರೆದಿದ್ದು, ಮೊದಲ ದಿನ ಹಾಗೂ ಕೊನೆಯ ದಿನ ಮತ್ತು ಅಕ್ಟೋಬರ್ 25 ರಂದು ಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ನಿಷೇಧಿಸಲಾಗಿತ್ತು. ಉಳಿದ ಹನ್ನೆರಡು ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆರಯಲಾಗಿತ್ತು.











Click it and Unblock the Notifications