Hasanamba 2023: ನವೆಂಬರ್ 2ರಿಂದ ಹಾಸನಾಂಬೆಯ ದರ್ಶನ ಆರಂಭ
ಹಾಸನ, ಆಗಸ್ಟ್ 04: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲು ಈ ವರ್ಷ ನವೆಂಬರ್ 2ರಂದು ಸಂಪ್ರದಾಯ ಬದ್ಧವಾಗಿ ತೆರೆಯಲಿದೆ. ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ ಪ್ರಾರಂಭವಾಗಲಿದೆ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ವಹಿಸುವಂತೆ ಸೂಚನೆ ನೋಡಿದರು.

2023 ಪ್ರಸಕ್ತ ವರ್ಷದಲ್ಲಿ ವೆಂಬರ್ 2ರಂದು ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತಿದ್ದು, ದೇವರ ದರ್ಶನಕ್ಕೆ ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ಪಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.
ಮೂರು ತಿಂಗಳ ಕಾಲಾವಕಾಶವಿದೆ. ಅಧಿಕಾರಿಗಳು ಈಗಿನಿಂದಲೇ ಕೆಲಸಗಳಿಗೆ ನಿಯಮಾನುಸಾರ ಟೆಂಡರ್ ಕರೆದು ಕರ್ತವ್ಯ ನಿರ್ವಹಿಸಬೇಕು, ನಗರ ಸಭೆಯಿಂದ ರಸ್ತೆಗಳ ದುರಸ್ತಿ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ, ಆಹ್ವಾನ ಪತ್ರಿಕೆಗಳ ಮುದ್ರಣ, ವಿಐಪಿ ಹಾಗೂ ವಿವಿಐಪಿ ಪಾಸ್ ವಿತರಣೆ, ಭಕ್ತಾಧಿಗಳು ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಲಾಡು ಪ್ರಸಾದ, ದೊನ್ನೆ ಪ್ರಸಾದ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

2023ರ ನವೆಂಬರ್ 2ರಿಂದ ನವೆಂಬರ್ 15ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, 14 ದಿನಗಳ ಕಾಲ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲ ಬಾಗಿಲು ತೆರೆದಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಲಾಗಿತ್ತು, ಪ್ರತಿ ದಿನ 30 ರಿಂದ 50 ಸಾವಿರ ಭಕ್ತರಂತೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದರು.












Click it and Unblock the Notifications