Hasanamba 2023: ಹಾಸನಾಂಬೆ ದರ್ಶನ ಸಂಪನ್ನ, ಶಾಸ್ತ್ರೋತ್ರವಾಗಿ ಗರ್ಭಗುಡಿ ಬಾಗಿಲು ಕ್ಲೋಸ್
ಹಾಸನ, ನವೆಂಬರ್ 15: ಈ ವರ್ಷದ ಹಾಸನಾಂಬೆ ದರ್ಶನ ಇಂದು ಸಂಪನ್ನವಾಗಿದ್ದು, ಮಧ್ಯಾಹ್ನ 12:23ಕ್ಕೆ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ನವೆಂಬರ್ 2ರಂದು ಆರಂಭವಾಗಿದ್ದ ಹಾಸನಾಂಬ ದರ್ಶನ ಇಂದು ಮುಕ್ತಾಯವಾಗಿದೆ.
ಕೊನೆ ಹಂತದಲ್ಲಿ ಉಸ್ತುವಾರಿ, ಸಚಿವರು ಶಾಸಕರು ಹಾಗು ಗಣ್ಯರು ಹಾಸನಾಂಬೆಯ ದರ್ಶನ ಪಡೆದಿದ್ದು, ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರ ಸಮ್ಮುಖದಲ್ಲೇ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಬಳಿಕ ಎಲ್ಲರ ಮುಂದೆ ಬೀಗ ಪ್ರದರ್ಶನ ಮಾಡಿ ಬೀಗ ಹಾಕಿದ ಪ್ರಧಾನ ಅರ್ಚಕ ನಾಗರಾಜ್ ಬಳಿಕ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿದ್ದಾರೆ.

ಈ ವರ್ಷ ದ 14 ದಿನಗಳ ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದಿದ್ದು, ಕಳೆದ 12 ದಿನಗಳಲ್ಲಿ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಈ ವರ್ಷ ನವೆಂಬರ್ 2ರ ಗುರುವಾರ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆದು ನವೆಂಬರ್ 3ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಕ್ತರ ದರ್ಶನದ 12ನೇ ದಿನವಾದ ಮಂಗಳವಾರ ಅಹೋರಾತ್ರಿ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಭಕ್ತರ ದಂಡೇ ಹಾಸನಾಂಬೆಯ ದರ್ಶನಕ್ಕೆ ಹರಿದು ಬಂದಿತ್ತು.
ಇದುವರೆಗೆ ಹಾಸನಾಂಬೆ ಇತಿಹಾಸದಲ್ಲಿ ದಾಖಲೆ ಎಂಬಂತೆ ಈ ಬಾರಿ 12 ದಿನ ಪೂರ್ಣಗೊಂಡ ಬಳಿಕ 13 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಶಕ್ತಿ ಯೋಜನೆಯಿಂದ ಈ ಬಾರಿ ಮಹಿಳಾ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಇನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಆದಾಯ ಬಂದಿದೆ. ಈವರೆಗೆ ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ ಐದೂವರೆ ಕೋಟಿ ಆದಾಯ ಬಂದಿದೆ. 1 ಸಾವಿರ ಟಿಕೆಟ್ ಮಾರಾಟದಿಂದ 2,80,52,000 ರೂ. 300 ರೂ, ಟಿಕೆಟ್ ಮಾರಾಟದಲ್ಲಿ 2,15,56,500 ರೂ, ಲಡ್ಡು ಮಾರಾಟದಲ್ಲಿ 56,11,520 ರೂ ಸಂಗ್ರಹವಾಗಿದೆ.












Click it and Unblock the Notifications