Hassan: ಕೆರೆಗೆ ಈಜಲು ಹೋದ ಒಂದೇ ಗ್ರಾಮದ ನಾಲ್ವರು ಬಾಲಕರು ನೀರುಪಾಲು
ಹಾಸನ, ಮೇ 16: ಶಾಲೆ ರಜೆ ಇರುವ ಕಾರಣ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವಂತಹ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಮುತ್ತಿಗೆ ಗ್ರಾಮದ ಜೀವನ್(13), ಸಾತ್ವಿಕ್(11), ವಿಶ್ವ(12), ಪೃಥ್ವಿ(12) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಸದ್ಯ ಶಾಲೆಗೆ ಬೇಸಿಗೆ ರಜೆಯಿದ್ದು, ಮಕ್ಕಳು ಗ್ರಾಮದಲ್ಲೇ ಆಟವಾಡುತ್ತಾ ಕೆರೆ ಸಮೀಪ ತೆರಳಿದ್ದಾರೆ. ಒಟ್ಟು ಐದು ಬಾಲಕರು ಕೆರೆಯಲ್ಲಿ ಈಜಲು ತೆರಳಿದ್ದಾರೆ. ಐವರ ಪೈಕಿ ಜೀವನ್, ಸಾತ್ವಿಕ್, ವಿಶ್ವ ಹಾಗೂ ಪೃಥ್ವಿ ಉಸಿರುಗಟ್ಟಿ ನೀರಿನಲ್ಲಿ ಮುಳುಗಿದ್ದಾರೆ. 12.30 ಸುಮಾರಿಗೆ ಘಟನೆ ನಡೆದಿದ್ದು, ಐವರಲ್ಲಿ ಬದುಕಿದ ಬಾಲಕ ಬಂದು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾನೆ.

ಸ್ಥಳೀಯರು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಮುಳುಗಿದ್ದಾರೆ. ಕೆರೆ ಆಳವಿದ್ದ ಕಾರಣ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಗಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕೆಲವು ಮೃತದೇಹಗಳು ಪತ್ತತೆಯಾಗಿದ್ದು, ಮಕ್ಕಳ ಮೃತದೇಹ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಬಾಲಕರ ಶೋಧ ಕಾರ್ಯ ಮುಂದುವರಿದಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು ಬಾಲಕರ ಪೋಷಕರನ್ನು ಸಂತೈಸಿದ್ದಾರೆ.

ಮೂಡಿಗೆರೆಯಲ್ಲಿ ಗ್ರಾಮಗಳಿಗೆ ನುಗ್ಗಿದ ಒಂಟಿ ಸಲಗ, ಗ್ರಾಮಸ್ಥರು ಕಂಗಾಲು
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಗರವಳ್ಳಿ ಗ್ರಾಮಕ್ಕೆ ಒಂಟಿ ಸಲಗ ಎಂಟ್ರಿ ಕೊಟ್ಟಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹಂಗರವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲೇ ಕಾಡಾನೆ ಓಡಾಟ ನಡೆಸಿದ್ದು ಗ್ರಾಮಸ್ಥರಲ್ಲಿ ಭಯ ಸೃಷ್ಟಿಯಾಗಿದೆ. ಇನ್ನು ಈ ಗ್ರಾಮದ ಸುತ್ತ ಮುತ್ತ ಮೂರು ದಿನಗಳಿಂದ ಕಾಡಾನೆ ಬೀಡು ಬಿಟ್ಟಿದೆ. ಇನ್ನು ಕಾಫಿ ತೋಟದ ಕೆಲಸಕ್ಕೆ ತೆರಳದಂತೆ ಕಾರ್ಮಿಕರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಕಾಫಿ ತೋಟಗಳಲ್ಲೂ ಕಾಡಾನೆ ಸಂಚಾರ ಮಾಡಿದ ಹಿನ್ನೆಲೆಯಲ್ಲಿ ಕಾಫಿ ಗಿಡಗಳಿಗೆ ಹಾನಿಯಾಗಿದೆ. ಕೂಡಲೇ ಒಂಟಿ ಸಲಗವನ್ನು ಪತ್ತೆ ಹಚ್ಚಿ ಗ್ರಾಮದಿಂದ ಓಡಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.












Click it and Unblock the Notifications