HD Deve Gowda Casted Vote: ಪಡುವಲಹಿಪ್ಪೆ ಗ್ರಾಮದಲ್ಲಿ ಮತ ಚಲಾಯಿಸಿದ ಎಚ್.ಡಿ.ದೇವೇಗೌಡ ದಂಪತಿ
ಹಾಸನ, ಮೇ, 10: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ರಾಜಕಾರಣಿಗಳು ಕುಟುಂಬ ಸಮೇತರಾಗಿ ಆಗಮಿಸಿ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು. ಅದೇ ರೀತಿ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ ಮಾಜಿ ಪ್ರಧಾನಿ ಎ.ಚ್.ಡಿ ದೇವೇಗೌಡ ಅವರು ಮತ ಚಲಾವಣೆ ಮಾಡಿದರು.
ಹಾಸನ ಜಿಲ್ಲೆಯ ಪಡುವಲಹಿಪ್ಪೆ ಗ್ರಾಮಕ್ಕೆ ಪತ್ನಿ ಚೆನ್ನಮ್ಮ ಅವರ ಜೊತೆ ಆಗಮಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮತದಾನ ಚಲಾವಣೆ ಮಾಡಿದರು.

ಮತ ಚಲಾಯಿಸಿ ದೇವೇಗೌಡರು ಹೇಳಿದ್ದೇನು?
ನಂತರ ಮಾತನಾಡಿದ ದೇವೇಗೌಡರು, ನಾನು ಮತ್ತು ನನ್ನ ಪತ್ನಿ ಚೆನ್ನಮ್ಮ, ರೇವಣ್ಣ ಮತದಾನ ಮಾಡಿ ನಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡಿದ್ದೇವೆ. ನನ್ನ ಹುಟ್ಟೂರಿನಲ್ಲಿರುವ ಆಸ್ತಿಯನ್ನೆಲ್ಲ ನನ್ನ ತಮ್ಮಂದಿರು ಮತ್ತು ಚಿಕ್ಕಪ್ಪಂದಿರಿಗೆ ವಹಿಸಿಕೊಟ್ಟೆ. ನಾವು ಇಲ್ಲಿ ಮೊದಲು ಜಮೀನು ತೆಗೆದುಕೊಂಡು ವ್ಯವಸಾಯ ಶುರು ಮಾಡಿದ್ದೆವು. ಆಗಿನಿಂದ ಇಲ್ಲೇ ಮತದಾನ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ರೇವಣ್ಣ ಆಗಿನ್ನು ಚಿಕ್ಕ ಹುಡುಗ, ಅವರು ವಿದ್ಯಾಭ್ಯಾಸ ಮಾಡುತ್ತಿರು. ಅವರು ಐಟಿಐ ಕೈಗಾರಿಕೆ ಮಾಡಬೇಕೆಂಬ ಆಸೆ ಇತ್ತು. ಆದರೆ ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದೆ. ಆದ್ದರಿಂದ ರೇವಣ್ಣ ಐಟಿಐ ಬಿಟ್ಟು ವ್ಯವಸಾಯ ಶುರು ಮಾಡಿದರು.
ಇಲ್ಲಿನ ಜನರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರೆ ಅದರ ಕೀರ್ತಿ ರೇವಣ್ಣಗೆ ಸಲ್ಲಬೇಕು. ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ರೇವಣ್ಣ ಇಲ್ಲಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಅವರು, ಮತದಾರರು ಚಲಾಯಿಸಿರುವ ಹಕ್ಕಿನ ಬಗ್ಗೆ ಮೇ 13ರಂದು ತಿಳಿಯಲಿದೆ. ಅಲ್ಲಿಯವರೆಗೂ ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದರು. ಅಲ್ಲದೆ ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ಬಾರಿ ಯಶಸ್ವಿಯಾಗಿ ನಡೆದಿದೆ. ಪಂಚರತ್ನ ಯೋಜನೆ, ಸಾಲ ಮನ್ನದಂತಹ ವಿಶೇಷ ಕಾರ್ಯಕ್ರಮಗಳಿಗೆ ಜನ ಬೆಂಬಲ ನೀಡಬಹುದು ಎನ್ನವ ವಿಶ್ವಾಸ ಇದೆ. ಆದರೆ ಇದರ ಮಧ್ಯದಲ್ಲಿ ಹಣದ ವ್ಯವಹಾರಗಳು ಮತ್ತೊಂದು ನೋಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಅವರು ನೀಡಿರುವ ವಿನೂತನ ಯೋಜನೆಗಳಿಗೆ ಜನರು ಆಶೀರ್ವಾದ ಮಾಡಬಹುದು ಎಂಬ ಪೂರ್ಣ ವಿಶ್ವಾಸ ನನ್ನ ಮನಸ್ಸಿನಲ್ಲಿದೆ. ಮತ್ತೊಂದೆಡೆ ಹೊಳೆನರಸೀಪುರ ಪ್ರದೇಶದಲ್ಲೂ ರೇವಣ್ಣ ತಮ್ಮದೇ ಆದಂತಹ ಕೆಲಸವನ್ನು ಮಾಡಿದ್ದಾರೆ.
ಇಲ್ಲಿ ಮಾಡಿರುವ ಎಲ್ಲಾ ಅಭಿವೃದ್ಧಿ ಕೆಲಸಗಳ ಕೀರ್ತಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರಿಗೆ ಸಲ್ಲುತ್ತದೆ ಎಂದರು.
ಎಚ್.ಡಿ.ಕೆ ಕುಟುಂಬದಿಂದ ಮತ ಚಲಾವಣೆ
ಮತ್ತೊಂದೆಡೆ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಮತಯಾಚನೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಈ ಚುನಾವಣೆ ಹಣದಿಂದ ನಡೆಯುತ್ತಿದೆ ಎಂದಿ ಆರೋಪಿಸಿದರು.
ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವತಿ ನಿಖಿಲ್ ಜೊತೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 235ರಲ್ಲಿ ಮತದಾನ ಮಾಡಿದರು. ಈ ವೇಳೆ ಮಾಜಿ ಸಿ.ಎಂ. ಎಚ್.ಡಿ.ಕೆಗೆ ಮಾಗಡಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.
ನಂತರ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ.
ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನೆಡೆಯಾಗಿದೆ. ಆದರೂ ಸಹ ಜೆಡಿಎಸ್‌ಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕ ನೆರವು ನೀಡುವುದರಲ್ಲಿ ವಿಫಲಗೊಂಡಿರುವುದು ನನಗೆ ಆಘಾತವಾಗಿದೆ. ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹಣದ ಕೊರತೆಯಿಂದ ನಮಗೆ ಹಿನ್ನೆಡೆಯಾಗಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದ ಪೆಟ್ಟು ತಿಂದಿದ್ದೇನೆ. ಕೆಲವು ಅಭ್ಯರ್ಥಿಗಳು ಬುಕ್ ಆಗಿಬಿಟ್ಟಿದ್ದಾರೆ ಅಂತಾ ತಪ್ಪು ತಿಳಿಯಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹಣದ ಕೊರತೆಯಿಂದ ಕೊನೆ ಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು ಆಗಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ. ಆದರೂ ನಾವು ಕಾಂಗ್ರೆಸ್, ಬಿಜೆಪಿಗಿಂತ ಮುಂದೆ ಇರುತ್ತೇವೆ. ಈ ಮೂಲಕ ಜೆಡಿಎಸ್‌ಗೆ ಬಹುಮತ ಬರಲಿದೆ.
ಇನ್ನು ಅತಂತ್ರ ಫಲಿತಾಂಶದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದೆ ಅದರ ಬಗ್ಗೆ ಮಾತನಾಡುತ್ತೇನೆ. ಬಿಜೆಪಿ - ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ಈ ಬಾರಿಯ ಚುನಾವಣೆ ಹಣದಿಂದ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗೆಯೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನೊಬ್ಬ ಯುವಕನಾಗಿದ್ದು, ನನಗೂ ಆತಂಕವಿದೆ. ಮುಂದೆ ಈ ವ್ಯವಸ್ಥೆಯನ್ನು ರಾಜ್ಯದ ಜನರು ಸರಿಪಡಿಸಬೇಕಿದೆ. ನಾವು ರಾಮನಗರದಲ್ಲಿ 25 ವರ್ಷಗಳಿಂದ ಸೇವೆ ಮಾಡಿದ್ದೇವೆ. ಜನರು ನಮ್ಮನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications