ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದ ರೈತರಿಗೆ ಬೀಡಾಡಿ ಕುದುರೆಗಳ ಕಾಟ!

By ಬಿಎಂ ಲವಕುಮಾರ್
|
Google Oneindia Kannada News

ಹಾಸನ, ಆಗಸ್ಟ್ 20: ರೈತರು ಕಾಡಾನೆ, ಕಾಡುಹಂದಿ ಮುಂತಾದ ವನ್ಯಪ್ರಾಣಿಗಳ ಕಾಟ ಅನುಭವಿಸುವುದು ಇದ್ದದ್ದೇ. ಆದರೆ, ನಗರಕ್ಕೆ ಹೊಂದಿಕೊಂಡಂತೆ ಇರುವ ತಮ್ಲಾಪುರದ ರೈತರು ತೊಂದರೆ ಅನುಭವಿಸುತ್ತಿರುವುದು ವನ್ಯಪ್ರಾಣಿಗಳಿಂದಲ್ಲ; ಬದಲಾಗಿ ಬೀಡಾಡಿ ಕುದುರೆಗಳಿಂದ ಎಂದರೆ ಅಚ್ಚರಿಯಾಗಬಹುದು.

ಈ ಗ್ರಾಮವು ನಗರಕ್ಕೆ ಹೊಂದಿಕೊಂಡಿರುವುದರಿಂದ ನಗರದಲ್ಲಿ ವಾಸಿಸುವ ಬೀಡಾಡಿ ಕುದುರೆಗಳು ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿದ್ದು, ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಕಳೆದ ಮೂರು ತಿಂಗಳಿಂದ ಈ ಕುದುರೆಗಳ ಕಾಟ ಆರಂಭವಾಗಿದ್ದು, ಅವುಗಳಿಂದ ಬೆಳೆಗಳನ್ನು ರಕ್ಷಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ.

Farmers suffering from horses in Tamlapura, Hassan

ನಗರ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುದುರೆಗಳಿದ್ದು, ಇವು ಯಾವಾಗ ಜಮೀನುಗಳಿಗೆ ಲಗ್ಗೆಯಿಡುತ್ತವೆ ಎಂಬುದೇ ಗೊತ್ತಾಗದಂತಾಗಿದೆ. ಹೀಗಾಗಿ ಇವುಗಳನ್ನು ಕಾಯುವುದೇ ದೊಡ್ಡ ತಲೆನೋವಾಗಿದೆ. ಸ್ವಲ್ಪ ಕಣ್ತಪ್ಪಿದರೂ ಬೆಳೆಗಳೆಲ್ಲ ಕುದುರೆಗಳ ಪಾಲಾಗುವ ಭೀತಿ ನಿರ್ಮಾಣವಾಗಿದೆ.

ಈಗಾಗಲೇ ತಮ್ಲಾಪುರದ ಗ್ರಾಮದ ರೈತರು ಜೋಳ, ರಾಗಿ, ಭತ್ತ ಮೊದಲಾದ ಬೆಳೆಗಳನ್ನು ಬೆಳೆದಿದ್ದು ಅವುಗಳನ್ನು ಕುದುರೆಗಳು ನಾಶ ಮಾಡುತ್ತಿರುವುದರಿಂದ ಆಕ್ರೋಶಗೊಂಡ ರೈತರು ಅವುಗಳನ್ನು ಹಿಡಿದು ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅವುಗಳನ್ನು ಹಿಡಿಯುವ ಸಂದರ್ಭ ಹಲವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಕುದುರೆಗಳನ್ನು ಹಿಡಿದು ಕಟ್ಟಿ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಅವುಗಳನ್ನು ಕಟ್ಟಿ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂಧಿಸಿದವರ ಗಮನ ಸೆಳೆಯುವ ಸಲುವಾಗಿ ಎನ್ನುತ್ತಾರೆ ಗ್ರಾಮಸ್ಥರು.

Farmers suffering from horses in Tamlapura, Hassan

ಬೀಡಾಡಿ ದನಗಳಂತೆ ಕುದುರೆಗಳ ಸಂಖ್ಯೆ ಕೂಡ ನಗರದಲ್ಲಿ ಬೆಳೆಯುತ್ತಿವೆ. ಇದರ ಮಾಲಿಕರು ಯಾರೆಂಬುದೇ ತಿಳಿಯದಾಗಿದೆ. ಇವು ಎಲ್ಲೆಂದರಲ್ಲಿ ಮೇವು ಹುಡುಕಿಕೊಂಡು ಅಲೆಯುತ್ತಾ ತಮ್ಲಾಪುರ ಗ್ರಾಮದತ್ತ ಬರುತ್ತಿದ್ದು, ಇಲ್ಲಿ ರೈತರು ಬೆಳೆದ ಫಸಲನ್ನು ತಿಂದು ಹೊಟ್ಟೆಪಾಡು ಕಳೆಯುತ್ತಿವೆ.

ಸಾಲಮಾಡಿ ಬೆಳೆ ಬೆಳೆದು ಒಂದಷ್ಟು ಆರ್ಥಿಕವಾಗಿ ಸುಧಾರಿಸಿಕೊಳ್ಳಬಹುದೆಂದು ನಂಬಿದ್ದ ರೈತರು ಇದೀಗ ಕುದುರೆಗಳಿಂದ ಆತಂಕಕ್ಕೀಡಾಗಿದ್ದು ಕೂಡಲೇ ಕುದುರೆಗಳನ್ನು ಹಿಡಿದು ಬೇರೆಡೆಗೆ ಬಿಡುವಂತೆ ಆಗ್ರಹಿಸಿದ್ದಾರೆ.

ಕುದುರೆಗಾಡಿಗಳಿಗೆ ಬಳಸುತ್ತಿದ್ದ ಕುದುರೆಗಳಿಗೆ ವಯಸ್ಸಾದ ಕಾರಣ, ಇನ್ನು ಕೆಲವರು ಕುದುರೆಗಾಡಿಗಳಿಂದ ಹೆಚ್ಚಿನ ಆದಾಯ ಬಾರದ ಕಾರಣಗಳಿಂದ ಕುದುರೆಗಳನ್ನು ಬೀದಿಗೆ ಬಿಟ್ಟಿದ್ದು ಅವು ಎಲ್ಲೆಂದರಲ್ಲಿ ಅಲೆಯುತ್ತಾ ರೈತರಿಗೆ ತಲೆನೋವಾಗಿ ಪರಿಣಮಿಸಿವೆ.

ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನ ಹರಿಸಿ ಬೀಡಾಡಿ ಕುದುರೆಗಳಿಗೊಂದು ವ್ಯವಸ್ಥೆ ಮಾಡದೆ ಹೋದರೆ ರೈತರು ಬೆಳೆ ಬೆಳೆಯುವುದೇ ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಹಾಸನ ನಗರಸಭೆಯ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Farmers in Tamlapura, Hassan, are suffering from horses. Horses are rushing to farmers' lands and destroying hard-grown crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X