ಅರಕಲಗೂಡಿನಲ್ಲಿ ಮತದಾನ ಬಹಿಷ್ಕರಿಸಿದ 85 ಮುಸ್ಲಿಂ ಕುಟುಂಬ!
ಹಾಸನ, ಮೇ 03: ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ರಾಮನಾಥಪುರದಲ್ಲಿ ಮುಸ್ಲಿಮ್ ಸಮುದಾಯದವರು ಮತದಾನ ಬಹಿಷ್ಕರಿಸಿದ್ದಾರೆ.
ಕಾವೇರಿ ತಟದ ರಾಮನಾಥಪುರದಲ್ಲಿರುವ 85 ಮುಸ್ಲಿಂ ಕುಟುಂಬದ ಸುಮಾರು 340 ಮತದಾರರು ಈ ಬಾರಿ ಮತದಾನ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಈ ಊರಿನಲ್ಲಿ ಮುಸ್ಲಿಂ ಸಮುದಾಯದವರು ಮೃತರಾದರೆ, ದಫನ್ ಮಾಡಲು ಪ್ರತ್ಯೇಕ ಖಬರಿಸ್ತಾನ್ ಇಲ್ಲ. ಯಾರಾದರೂ ಮೃತರಾದರೆ, ಪಕ್ಕದ ಗ್ರಾಮಕ್ಕೆ ಹೋಗಿ ಕಷ್ಟಪಟ್ಟು ಅಂತಿಮ ಕ್ರಿಯೆ ನಡೆಸಬೇಕಾಗಿದೆ. ವರ್ಷಗಳಿಂದ ಕಳೆದ ಎರಡು ಸರ್ಕಾರಕ್ಕೂ ಮನವಿ ಸಲ್ಲಿಸಿದರೂ ಬೆಲೆ ಸಿಕ್ಕಿಲ್ಲ.
ಹೀಗಾಗಿ, ಬೇಡಿಕೆ ಈಡೇರಿಸುವ ತನಕ ಮತದಾನ ಮಾಡುವುದಿಲ್ಲ ಎಂದು ರಾಮನಾಥಪುರ ಜಾಮಿಯಾ ಮಸೀದಿ ಸಮಿತಿ ನಿರ್ಣಯ ಕೈಗೊಂಡಿದೆ.
ಅರಕಲಗೂಡಿನ ಹಾಲಿ ಶಾಸಕ, ಸಚಿವ ಎ ಮಂಜು ಅವರು ನೀಡಿದ್ದ ಭರವಸೆ ಹುಸಿಯಾಗಿದೆ. ಕಳೆದ 10 ವರ್ಷಗಳಲ್ಲಿ 15 ಮಂದಿ ಮೃತರಾಗಿದ್ದು, ಮೃತರ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಪಕ್ಕದ ಊರಿಗೆ ಕೊಂಡೊಯ್ದು ದಫನ್ ಮಾಡುತ್ತಿದ್ದೇವೆ. ಆದರೆ, ಕೆಲವೊಮ್ಮೆ ಪಕ್ಕದೂರಿನವರು ಸುಲಭಕ್ಕೆ ದಫನ್ ಮಾಡಲು ಅನುಮತಿ ನೀಡುವುದಿಲ್ಲ. ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮುನಾವರ್ ಅವರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications