Prajwal Revanna: ಮಗನ ಪೈಶಾಚಿಕ ಕೃತ್ಯಗಳ ಬಗ್ಗೆ ಅಪ್ಪನಿಗೆ ಮೊದಲೇ ಗೊತ್ತಿತ್ತಾ?
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರ ಈಗ ರಾಜ್ಯಮಟ್ಟದಲ್ಲಿ ಮಾತ್ರವೇ ಅಲ್ಲ ರಾಷ್ಟ್ರಮಟ್ಟದಲ್ಲಿ ಕೂಡ ವ್ಯಾಪಕ ಚರ್ಚೆಯಾಗುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ನಿರಪರಾಧಿ ವಿಡಿಯೋಗಳನ್ನು ಮಾರ್ಫ್ ಮಾಡಲಾಗಿದೆ ಎಂದು ಅವರ ಆಪ್ತರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ. ಇದೆಲ್ಲ ಬೆಳವಣಿಗೆಗಳ ನಡುವೆ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಮಗನ ಬಗ್ಗೆ ಅಪ್ಪ ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ವಿಚಾರ ಭಾರಿ ಸದ್ದು ಮಾಡಿದ ಬಳಿಕ ಅವರ ತಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲಾ 4-5 ವರ್ಷಗಳಷ್ಟು ಹಳೆಯದು, ಎಸ್‌ಐಟಿ ತನಿಖೆ ಮಾಡುತ್ತಿರುವ ಕಾರಣ ನಾನು ಯಾವ ಪ್ರತಿಕ್ರಿಯೆ ನೀಡಲ್ಲ, ಕಾನೂನು ರೀತಿಯಲ್ಲೇ ನಾವು ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಯಾವುದರ ಬಗ್ಗೆಯೋ ರಿಯಾಕ್ಟ್ ಮಾಡಲ್ಲ, ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿರುವುದು ಪಕ್ಷದ ವಿಚಾರ. ಲೈಂಗಿಕ ಹಗರಣದ ಬಗ್ಗೆ ತನಿಖೆ ಮಾಡಲಿ, ಅವರ ಸರ್ಕಾರವೇ ಇದೆಯಲ್ಲ ಎಸ್‌ಐಟಿ ರಚನೆ ಮಾಡಿದ್ದಾರೆ ತನಿಖೆ ನಡೆಸಲಿ ಎಂದರು.
ಎಸ್‌ಐಟಿ ಮಾಡುವ ಬಗ್ಗೆ ಪ್ರಜ್ವಲ್ ರೇವಣ್ಣ ಅವರಿಗೇನು ಗೊತ್ತಿತ್ತಾ? ಮೊದಲೇ ಕಾರ್ಯಕ್ರಮ ನಿಗದಿಯಾಗಿದ್ದ ಕಾರಣ ಅವರು ಹೋಗಿದ್ದಾರೆ ವಿಚಾರಣೆಗೆ ಕರೆದಾಗ ಬರುತ್ತಾರೆ, ನಾವು ಇಲ್ಲೇ ಇದ್ದೇವಲ್ಲ, ಎಲ್ಲಿಗೂ ಹೆದರಿ ಓಡಿ ಹೋಗಿಲ್ಲ ಎಂದಿದ್ದಾರೆ.
ಮೊದಲೇ ಗೊತ್ತಿತ್ತಾ?
ಇದು 4-5 ವರ್ಷಗಳಷ್ಟು ಎಂದು ಹೆಚ್‌ಡಿ ರೇವಣ್ಣ ಹೇಳಿರುವುದು ಮಗನ ಕೃತ್ಯಗಳ ಬಗ್ಗೆ ಅವರಿಗೆ ಮೊದಲೇ ಗೊತ್ತಿತ್ತಾ ಎನ್ನುವ ಅನುಮಾನ ಮೂಡುವಂತಾಗಿದೆ. ಇನ್ನು ಇದೆಲ್ಲಾ ಹಳೆಯದು ಎನ್ನುವ ಮೂಲಕ ಮಗನೇ ಮಾಡಿದ್ದು ಎಂದು ಒಪ್ಪಿಕೊಂಡರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಪೆನ್‌ಡ್ರೈವ್ ಪ್ರಕರಣದ ತನಿಖೆಗಾಗಿ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಎಸ್‌ಐಟಿ ಪೆನ್‌ಡ್ರೈವ್ ವಿಡಿಯೋಗಳ ಬಗ್ಗೆ ಕೂಲಂಕುಷ ತನಿಖೆ ಮಾಡಲಿದ್ದು, ಸರ್ಕಾರಕ್ಕೆ ವರದಿ ನೀಡಲಿದೆ. ಪ್ರಕರಣದ ವಿಚಾರಣೆಗಾಗಿ ಪ್ರಜ್ವಲ್ ರೇವಣ್ಣರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.












Click it and Unblock the Notifications