ಹಾಸನಾಂಬ ದರ್ಶನಕ್ಕೆ ಕಿಕ್ಕಿರಿದು ಬಂದ ಭಕ್ತಸಾಗರ; ದರ್ಶನಕ್ಕೆ ವ್ಯವಸ್ಥೆ ಹೇಗಿದೆ?
ಹಾಸನ, ಅಕ್ಟೋಬರ್, 14: ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 13ರಂದು ತೆರೆದಿದ್ದು, ಭಕ್ತರ ದರ್ಶನಕ್ಕೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ದೇವಿ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಂಬೆಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ತೊಲಗಿದ ಕಾರಣ ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಇಂದು ಭಕ್ತರ ದಂಡೇ ಹರಿದುಬಂದಿದೆ. ಭಕ್ತರು ಕಿಕ್ಕಿರಿದು ಬರುವ ಕಾರಣ ದೇವಾಲಯದ ಹೊರಭಾಗದಿಂದಲೂ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆಯ ದರ್ಶನ ಕಲ್ಪಿಸಲಾಗುತ್ತದೆ. ಅಕ್ಟೋಬರ್ 13 ರಿಂದ ಅಕ್ಟೋಬರ್ 27ರವರೆಗೂ ದೇಗುಲದ ಬಾಗಿಲು ಓಪನ್ ಆಗಿರುತ್ತದೆ. ಆದರೆ ಮೊದಲ ದಿನವಾದ ಕಾರಣ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಅಕ್ಟೋಬರ್ 13ರಂದು 12 ಗಂಟೆ 12 ನಿಮಿಷಕ್ಕೆ ಗರ್ಭಗುಡಿಗೆ ಹಾಕಿದ್ದ ಬೀಗವನ್ನು ತೆರೆಯಲಾಗಿತ್ತು. ನಂತರ ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಿದ್ದರು. ಸತತ ಒಂದು ಗಂಟೆಗಳ ಕಾಲ ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಿದ್ದರು. ಒಟ್ಟು 12 ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಮೊದಲ ದಿನ ನಿನ್ನೆ ಹಾಸನಾಂಬೆ ದರ್ಶನ ಸಿಗದೆ ಭಕ್ತರು ಪರದಾಡಿದ್ದರು.

ಒಂದೂವರೆ ಗಂಟೆಯಲ್ಲಿ ಮತ್ತೆ ಗರ್ಭಗುಡಿಗೆ ಬೀಗ
ದೇಗುಲದ ಗರ್ಭಗುಡಿ ಬಾಗಿಲು ತೆರೆದ ಒಂದೂವರೆ ಗಂಟೆಯಲ್ಲಿ ಮತ್ತೆ ಗರ್ಭಗುಡಿಗೆ ಬೀಗ ಹಾಕಲಾಗಿತ್ತು. ದೇಗುಲ ಸ್ವಚ್ಛ ಮಾಡಬೇಕು ಎಂದು ಗರ್ಭಗುಡಿಗೆ ಬೀಗ ಹಾಕಲಾಯಿತು ಎಂದು ಅರ್ಚಕರು ತಿಳಿಸಿದ್ದರು. ಆ ವೇಳೆ ದೇವಿ ದರ್ಶನ ಸಿಗದೆ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಪ್ರತೀ ವರ್ಷ ಬಾಗಿಲು ತೆರೆದ ಬಳಿಕ ದೇಗುಲದಲ್ಲಿ ಹಾಜರಿರುವ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ವರ್ಷ ಅರ್ಚಕರು ಏಕಾಏಕಿ ಗರ್ಭಗುಡಿಗೆ ಬೀಗಹಾಕಿ ಹೋಗಿದ್ದರಿಂದ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು
ಅಧಿಕೃತವಾಗಿ ಮೊದಲ ದಿನದಂದು ಭಕ್ತರಿಗೆ ದರ್ಶನ ಇರುವುದಿಲ್ಲ ಎಂಬ ಸೂಚನೆ ಇದ್ದರೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಗಮನ ಸೆಳೆದಿತ್ತು. ಇಂದಿನಿಂದ ಭಕ್ತರಿಗೆ ದೀವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಪೊಲೀಸರು ಕೂಡ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.

ಒಮ್ಮೆ ಹಚ್ಚಿದ ಹಣತೆ ಆರುವುದಿಲ್ಲ, ನಂಬಿಕೆ
ಹಾಸನಾಂಬೆ ದೇಗುಲ ಹಲವು ಪಾವಡಗಳಿಂದಲೂ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ದೇವಿಗೆ ಒಮ್ಮೆ ಹಚ್ಚಿದ ಹಣತೆ ಆರುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ದೇವರ ಮುಡಿಗಿಟ್ಟ ಹೂ ಬಾಡುವುದಿಲ್ಲ ಎನ್ನುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗೆ ಈ ಬಾರಿಯೂ ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಿಕ್ಕಿರಿದು ಆಗಮಿಸಿದ್ದಾರೆ.

ಭಕ್ತರಿಕೆ ಸಿಗಲಿದೆ 12 ದಿನ ಹಾಸನಾಂಬೆ ದರ್ಶನ
ಇಂದು ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ದೊರೆತ್ತಿದ್ದು, ಒಟ್ಟು 12 ದಿನ ಹಾಸನಾಂಬೆ ದರ್ಶನ ಸಿಗಲಿದೆ. ಬಲಿಪಾಡ್ಯಮಿಯ ಮಾರನೇ ದಿನ ದೇವಿಯ ಉತ್ಸವಕ್ಕೆ ತೆರೆ ಬೀಳಲಿದೆ. ಹೀಗೆ ಇಂದಿನಿಂದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಸಿಕಿದ್ದು, ಇನ್ನು ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications