ಸಭೆ ನಡುವೆ ಮಾತನಾಡಿದ ಮಗ ರೇವಣ್ಣನ ಹೊರಕಳುಹಿಸಿದ ದೇವೇಗೌಡ
ಹಾಸನ, ಜನವರಿ 11: ಸಭೆ ನಡೆಯುವ ವೇಳೆ ಅನ್ಯ ಕೆಲಸದಲ್ಲಿ ನಿರತರಾಗಿದ್ದ ಮಂತ್ರಿ ಎಚ್.ಡಿ.ರೇವಣ್ಣ ಅವರ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಿಟ್ಟಾದ ಘಟನೆ ಇಂದು ನಡೆಯಿತು.
ಹಾಸನದಲ್ಲಿ ದೇವೇಗೌಡ ಅವರು ಇಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆದಿದ್ದರು, ಸಭೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಸಹ ಇದ್ದರು.
ಆದರೆ ಸಭೆ ನಡೆಯುವ ಸಮಯದಲ್ಲಿ ಸಚಿವ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ನಿಂತಿದ್ದರು, ಇದು ದೇವೇಗೌಡ ಅವರನ್ನು ಕೆರಳಿಸಿತು.

'ಏ ರೇವಣ್ಣ ನಿಂದೇನಾದರೂ ವೈಯಕ್ತಿಕ ಇದ್ದರೆ ಆಚೆ ಹೋಗಿ ಮಾತನಾಡು, ಇಲ್ಲಿ ಸಭೆ ಮಾಡಲು ಬಂದಿದ್ದೇವೆ, ಇಲ್ಲಿ ಮಾಧ್ಯಮದವರಿದ್ದಾರೆ ಗಮನವಿರಲಿ ಎಂದು ರೇಗಿದರು. ಅಲ್ಲದೆ ಅಧಿಕಾರಿಗಳಿಗೂ ಸೂಚ್ಯವಾಗಿ ಹೇಳಿದ ದೇವೇಗೌಡರು, ರೇವಣ್ಣನ ಜೊತೆ ಮಾತನಾಡೋದಾದ್ರೆ ಪಕ್ಕಕ್ಕೆ ಹೋಗಿ ಅಂದರು.
ಅಪ್ಪನ ಸಿಟ್ಟು ಗಮನಿಸಿದ ಸಚಿವ ರೇವಣ್ಣ ಅಧಿಕಾರಿಗಳನ್ನು ಕರೆದುಕೊಂಡು ಕೂಡಲೆ ಹೊರಗೆ ಹೋಗಿ ಮಾತನಾಡಿದರು. ಮಾತು ಮುಗಿದ ನಂತರ ಮತ್ತೆ ಬಂದು ಸಭೆಗೆ ಸೇರಿಕೊಂಡರು.












Click it and Unblock the Notifications